ಬೆಂಗಳೂರಿಗರ ನಿದ್ದೆ ಕಸಿಯುತ್ತಿದೆ ಈ ತಾಪಮಾನ! ಹೇಗೆ ಗೊತ್ತಾ? – Kannada News | Climate Change Stealing Bangaloreans Sleep as city Hits Highest Footprint in New Study

ಬೆಂಗಳೂರು, ಜುಲೈ 18: ನಗರದ ಜನರಿಗೆ ಟ್ರಾಫಿಕ್ ಕಿರಿಕಿರಿ, ವಾಯು ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ದಿನಚರಿಯ ಭಾಗವಾಗಿಹೋಗಿವೆ. ಇದರ ನಡುವೆ ಹೊಸ ತಲೆನೋವೊಂದು ಉಲ್ಬಣಿಸಿದ್ದು, ಬೆಂಗಳೂರು ಜನರ ನಿದ್ದೆಗೆ ಕನ್ನ ಹಾಕುತ್ತಿದೆ. ಮುಂಗಾರಿನ ಮುನಿಸಿಂದ ಬೆಂಗಳೂರಿಗರು ತತ್ತರಿಸುತ್ತಿರುವಾಗಲೇ ತಾಪಮಾನ ಏರಿಕೆಯಿಂದಾಗಿ ನಗರದ ಜನರು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ. ಹೌದು, ಅಮೆರಿಕ ಮೂಲದ ‘ಕ್ಲೈಮೇಟ್ ಸೆಂಟ್ರಲ್’ ಸಂಸ್ಥೆ ನಡೆಸಿರುವ ಜಾಗತಿಕ ಮಟ್ಟದ ಸಂಶೋಧನಾ ವರದಿಯೊಂದರಲ್ಲಿ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ.

ನಗರದ ಜನರು ವರ್ಷಕ್ಕೆ ಎಷ್ಟು ತಾಸು ನಿದ್ದೆ ಕಳೆದುಕೊಳ್ಳುತ್ತಾರೆ ಗೊತ್ತಾ?

ರಾತ್ರಿಯ ತಾಪಮಾನದಲ್ಲಿ ಆಗುತ್ತಿರುವ ದಿಢೀರ್ ಏರಿಕೆಯಿಂದಾಗಿ ಭಾರತದ ಮೆಟ್ರೋ ನಗರಗಳ ಜನರು ವರ್ಷಕ್ಕೆ ಸರಾಸರಿ 65 ರಿಂದ 93 ಗಂಟೆಗಳಷ್ಟು ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ ವಾತಾವರಣ ಬದಲಾವಣೆಯ ಅತಿ ದೊಡ್ಡ ಪ್ರಭಾವ ಕಾಣಸಿಗುತ್ತದೆ. ಬೆಂಗಳೂರಿಗರು ವರ್ಷಕ್ಕೆ ಸರಾಸರಿ 67 ಗಂಟೆಗಳ ಕಾಲ ನಿದ್ದೆಯಿಂದ ವಂಚಿತರಾಗುತ್ತಿದ್ದು, ಅದರಲ್ಲಿ ಶೇಕಡಾ 12 ರಷ್ಟು, ಅಂದರೆ ಸುಮಾರು 8 ಗಂಟೆಗಳ ನಿದ್ದೆ ಕೇವಲ ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯಿಂದಾಗಿಯೇ ನಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಹವಾಮಾನ ಬದಲಾವಣೆಯ ನೇರ ಪರಿಣಾಮದಿಂದ ಅತಿ ಹೆಚ್ಚು ನಿದ್ದೆ ಕಳೆದುಕೊಳ್ಳುತ್ತಿರುವುದು ಬೆಂಗಳೂರಿಗರೇ ಎಂಬುದು ಈ ವರದಿಯಿಂದ ಸಾಬೀತಾಗಿದೆ.

ನಿದ್ದೆಗೂ ಹವಾಮಾನಕ್ಕೂ ಏನು ಸಂಬಂಧ?

ಮಾನವನ ದೇಹದ ಪ್ರಕೃತಿಯ ಪ್ರಕಾರ, ರಾತ್ರಿಯಾಗುತ್ತಿದ್ದಂತೆ ಆಳವಾದ ನಿದ್ದೆಗೆ ಜಾರಲು ದೇಹದ ಒಳಗಿನ ತಾಪಮಾನ ಕಡಿಮೆಯಾಗಬೇಕು. ಆದರೆ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ರಾತ್ರಿಯ ವೇಳೆಯೂ ಸೆಕೆ ಹೆಚ್ಚಿರುವುದರಿಂದ ದೇಹ ಸುಲಭವಾಗಿ ತಂಪಾಗುವುದಿಲ್ಲ. ಪರಿಣಾಮವಾಗಿ, ಜನರು ಮಧ್ಯರಾತ್ರಿ ಪದೇ ಪದೇ ಎಚ್ಚರಗೊಳ್ಳುವುದು, ಲಘು ನಿದ್ದೆ (Light Sleep) ಅಥವಾ ನಿದ್ದೆಯಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ನಿದ್ದೆಯ ಸಮಸ್ಯೆಯಾಗಿ ಉಳಿಯದೆ, ಜನರ ಮಾನಸಿಕ ನೆಮ್ಮದಿ, ಕೆಲಸದ ಸಾಮರ್ಥ್ಯ ಹಾಗೂ ಹೃದಯದ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *