ಬೆಂಗಳೂರಿಗೆ 11 ಎಲಿವೇಟೆಡ್ ಕಾರಿಡಾರ್, ಪ್ರಮುಖ ಆಸ್ತಿಗಳಿಗೆ ತೆರಿಗೆ ವಿನಾಯಿತಿ! ಸಚಿವ ಸಂಪುಟ ಮಹತ್ವದ ನಿರ್ಧಾರ – Kannada News | Karnataka Cabinet Approves 11 Elevated Corridors Worth rs 13262 Cr; Property Tax Waiver for Raj Bhavan, Kanteerava Stadium

ಸಚಿವ ಸಂಪುಟ ಸಭೆಯ ಬಳಿಕ ಹೊರ ತೆರಳುತ್ತಿರುವ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಏಪ್ರಿಲ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ (Karnataka Cabinet) ಸಭೆಯಲ್ಲಿ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕಲ್ಯಾಣ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೃಹತ್ ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಮೂಲಸೌಕರ್ಯಕ್ಕೆ ಬಲ

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 75.60 ಕಿಮೀ ಉದ್ದದ 11 ಎತ್ತರಿಸಿದ (Elevated) ಕಾರಿಡಾರ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ 13,262.70 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಅಲ್ಲದೆ, ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ 2 ಪಥದ ಮೇಲ್ಸೇತುವೆ ಹಾಗೂ ಐಒಸಿ (IOC) ಜಂಕ್ಷನ್ ಬಳಿ ಎಲಿವೇಟೆಡ್ ರೋಟರಿ ಫ್ಲೈ ಓವರ್ ನಿರ್ಮಾಣದ ಪರಿಷ್ಕೃತ ಅಂದಾಜು ಮೊತ್ತ 436.44 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದೆ.

ಪ್ರಮುಖ ಸ್ವತ್ತುಗಳಿಗೆ ತೆರಿಗೆ ವಿನಾಯಿತಿ

ಸಚಿವ ಸಂಪುಟವು ಬೆಂಗಳೂರಿನ ಕೆಲವು ಪ್ರಮುಖ ಐತಿಹಾಸಿಕ ಮತ್ತು ಸರ್ಕಾರಿ ಸ್ವತ್ತುಗಳಿಗೆ ಭಾರಿ ಮೊತ್ತದ ಆಸ್ತಿ ತೆರಿಗೆ ವಿನಾಯಿತಿ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಾಜಭವನ, ಕುಮಾರ ಕೃಪಾ ಅತಿಥಿ ಗೃಹ, ಶ್ರೀ ಕಂಠೀರವ ಕ್ರೀಡಾಂಗಣ ಹಾಗೂ ದಕ್ಷಿಣ ಪಾಲಿಕೆ ವ್ಯಾಪ್ತಿಯ ಕೋರಮಂಗಲ ಕ್ರೀಡಾಂಗಣಕ್ಕೆ ಆಸ್ತಿ ತೆರಿಗೆ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದರಿಂದ ಸುಮಾರು 81 ಕೋಟಿ ರೂ.ಗಳಷ್ಟು ತೆರಿಗೆ ಮೊತ್ತ ಮನ್ನಾ ಆದಂತಾಗಿದೆ.

ಇತರ ಪ್ರಮುಖ ನಿರ್ಧಾರಗಳು

  • ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನೂತನ ಕೇಂದ್ರ ಕಚೇರಿ ನಿರ್ಮಾಣಕ್ಕೆ 20 ಕೋಟಿ ರೂ. ಅನುಮೋದನೆ.
  • ಸಾರಿಗೆ ಇಲಾಖೆ: ಸುಪ್ರೀಂ ಕೋರ್ಟ್ ಆದೇಶದಂತೆ 16 ಮೋಟಾರು ವಾಹನ ನಿರೀಕ್ಷಕರ (MVI) ನೇಮಕಾತಿಗೆ ಘಟನೋತ್ತರ ಅನುಮೋದನೆ.
  • ಕಾರವಾರ ವಿಮಾನ ನಿಲ್ದಾಣ: ಕಾರವಾರ ವಿಮಾನ ನಿಲ್ದಾಣದ ಅಭಿವೃದ್ಧಿ ಜವಾಬ್ದಾರಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (AAI) ವರ್ಗಾಯಿಸಲು ಸಮ್ಮತಿ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಕಿಡಿ ಹೊತ್ತಿಸಿದ ದಾವಣಗೆರೆ ದಂಗಲ್: ಮುಸ್ಲಿಂ ನಾಯಕರ ತಲೆದಂಡಕ್ಕೆ ಸಚಿವರ ಆಕ್ಷೇಪ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 am, Fri, 17 April 26

Source link

Leave a Reply

Your email address will not be published. Required fields are marked *