ಸಾಂದರ್ಭಿಕ ಚಿತ್ರImage Credit source: Indian Institute for Human Settlements
ಬೆಂಗಳೂರು, ಆಗಸ್ಟ್ 7: ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಮತ್ತು ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಜಂಟಿಯಾಗಿ ನಡೆಸುತ್ತಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ (Freedom From Waste)’ ಅಭಿಯಾನದಡಿ ಕಳೆದ ಐದು ದಿನಗಳಲ್ಲಿ ಸುಮಾರು 4,000 ಟನ್ ಕಟ್ಟಡ ನಿರ್ಮಾಣ ಮತ್ತು ತೆರವು (Construction & Demolition – C&D) ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಈ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆ 2,500 ಟನ್ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ 1,500 ಟನ್ ತ್ಯಾಜ್ಯವನ್ನು ತೆರವುಗೊಳಿಸಿವೆ. ನಗರದ ವಿವಿಧ ಭಾಗಗಳಿಂದ ಸಂಗ್ರಹಿಸಿದ ನಿರ್ಮಾಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು 18 ಟಿಪ್ಪರ್‌ಗಳು ಹಾಗೂ 4 ಲೋಡರ್‌ಗಳನ್ನು ಬಳಸಲಾಗುತ್ತಿದೆ. ಸಂಗ್ರಹಿಸಲಾದ ತ್ಯಾಜ್ಯವನ್ನು ಮಾರೆನಹಳ್ಳಿ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಮಾರೆನಹಳ್ಳಿ ವಿಲೇವಾರಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ತ್ಯಾಜ್ಯ ನಿರ್ವಹಣೆ, ವಾಹನಗಳ ಸಂಚಾರ, ವಿಲೇವಾರಿ ಪ್ರಕ್ರಿಯೆ ಹಾಗೂ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲಿನ ಭದ್ರತಾ ಸಿಬ್ಬಂದಿಗೆ ಸೂಕ್ತ ವಸತಿ ಹಾಗೂ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರವನ್ನು ನಿರ್ಮಾಣ ತ್ಯಾಜ್ಯ ಮುಕ್ತಗೊಳಿಸುವ ಗುರಿಯೊಂದಿಗೆ ಈ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರು ರಸ್ತೆ ಬದಿ, ಚರಂಡಿ, ಖಾಲಿ ನಿವೇಶನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ತ್ಯಾಜ್ಯವನ್ನು ಎಸೆಯದೆ, ಪಾಲಿಕೆ ಸೂಚಿಸಿರುವ ವ್ಯವಸ್ಥೆಯ ಮೂಲಕವೇ ವಿಲೇವಾರಿ ಮಾಡುವಂತೆ ಮನವಿ ಮಾಡಿದ್ದಾರೆ.
‘ಕ್ಲಿಯರ್ ಇಟ್’ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ನೀಡಬಹುದು!
ಇದೇ ವೇಳೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಾಹಿತಿ ಪ್ರಕಾರ, ಕ್ಲಿಯರ್ ಇಟ್ (Clear It) ಮೊಬೈಲ್ ಅಪ್ಲಿಕೇಶನ್ ಮೂಲಕ 637 ದೂರುಗಳು ದಾಖಲಾಗಿವೆ. ಈ ಪೈಕಿ 75 ಸ್ಥಳಗಳಿಂದ ಸುಮಾರು 2,174 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, ತೂಕ ಪರಿಶೀಲನೆಯ ಬಳಿಕ ಒಟ್ಟು 1,476 ಟನ್ ತ್ಯಾಜ್ಯ ವಿಲೇವಾರಿಯಾಗಿರುವುದಾಗಿ ಪಾಲಿಕೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
