ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್​​ನ ಸೂಪರ್ ಸ್ಟಾರ್ ಜೂ ಎನ್​​ಟಿಆರ್ (Jr NTR) ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಆಗಮಿಸಿದ್ದರು. ನೆರೆ ರಾಜ್ಯದ ಸ್ಟಾರ್ ನಟ-ನಟಿಯರು ಸಿನಿಮಾ ಪ್ರಚಾರಕ್ಕಾಗಿ ಮಾತ್ರವೇ ಬೆಂಗಳೂರನ್ನು, ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಜೂ ಎನ್​​ಟಿಆರ್ ಅವರ ಯಾವ ಸಿನಿಮಾ ಸಹ ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ ಆದರೂ ಇಂದು ಹಠಾತ್ತನೇ ಅವರು ಬೆಂಗಳೂರಿಗೆ ಬಂದಿದ್ದರು. ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಕನ್ನಡದಲ್ಲಿಯೇ ಮಾತನಾಡಿದರು.

ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಜೂ ಎನ್​​ಟಿಆರ್ ಅವರು ಇಂದು ಬೆಂಗಳೂರಿಗೆ ಬಂದಿದ್ದರು. ಕಿಮ್ಸ್ ಜೊತೆಗೆ ಜೂ ಎನ್​​ಟಿಆರ್ ಅವರಿಗೆ ಬಲು ಆಪ್ತ ಬಂಧ ಇದೆ. 1983ರಲ್ಲಿ ಜೂ ಎನ್​​ಟಿಆರ್ ಅವರ ತಾತ ಎನ್​​ಟಿಆರ್ ಅವರೇ ಕಿಮ್ಸ್​​ಗೆ ಅಡಿಗಲ್ಲು ಹಾಕಿದ್ದರು. ಜೂ ಎನ್​​ಟಿಆರ್, 2009 ಭಾರಿ ರಸ್ತೆ ಅಪಘಾತಕ್ಕೆ ಈಡಾಗಿದ್ದರೂ ಸಹ ಅವರು ಕಿಮ್ಸ್​​ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್​​ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು.

ಈ ವೇಳೆ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಟ ಜೂ ಎನ್​​ಟಿಆರ್, ‘ನನಗೆ ಕರ್ನಾಟಕಕ್ಕೆ ಬರುವುದೆಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ತಾಯಿಯದ್ದು ಕುಂದಾಪುರ. ನನ್ನ ತಾಯಿ ಭಾಷೆ ಕನ್ನಡ. ಹಾಗಾಗಿ ಕರ್ನಾಟಕಕ್ಕೆ ಬರುವುದೆಂದರೆ ನನಗೆ ವಿಶೇಷ ಪ್ರೀತಿ’ ಎಂದು ಜೂ ಎನ್​ಟಿಆರ್ ಹೇಳಿದರು. ಕಿಮ್ಸ್​ನ ಸೇವೆಯನ್ನು ಕೊಂಡಾಡಿದ ಜೂ ಎನ್​​ಟಿಆರ್, ಕಿಮ್ಸ್​​ನವರು ‘ಪೇಷೆಂಟ್ ಈಸ್ ಪ್ಯಾರಾಮೌಂಟ್’ ಎಂಬ ಧ್ಯೇಯ ವಾಕ್ಯದೊಂದಿಗೆ ಸಲ್ಲಿಸುತ್ತಿರುವ ಸೇವೆ ಬೆಲೆಕಟ್ಟಲಾರದ್ದು, ಅವರು ಈ ಉದ್ಯಮದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅಪಾರ ಯಶಸ್ಸು ಅವರಿಗೆ ಸಿಗಲಿ ಎಂದು ಹಾರೈಸಿದರು.

ಇದನ್ನೂ ಓದಿ:ಜೂ ಎನ್​​ಟಿಆರ್​ ಹಳೆ ಸಿನಿಮಾ ಸೀಕ್ವೆಲ್​​ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?

ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದ ಜೂ ಎನ್​​ಟಿಆರ್, ‘ಮಹಿಳೆಯರನ್ನು ಹೇಗೆ ನೋಡಬೇಕು, ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸುವ ಪರಿಸ್ಥಿತಿ ಇದೇ ಎಂಬುದೇ ನನಗೆ ಬೇಸರ ತರುವ ವಿಷಯ. ಮಹಿಳೆಯರು ಎಷ್ಟು ಮುಖ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದು ಸ್ವಾಭಾವಿಕವಾಗಿ ಬರಬೇಕು. ಅದೆಲ್ಲ ಮನೆಯಿಂದಲೇ ಪ್ರಾರಂಭ ಆಗಬೇಕು, ನನ್ನ ಇಬ್ಬರು ಗಂಡು ಮಕ್ಕಳು ಸಹ ಹೆಣ್ಣು ಮಕ್ಕಳನ್ನು ಗೌರವಿಸುವ ವ್ಯಕ್ತಿಗಳಾಗಿಯೇ ಬೆಳೆಯಲಿದ್ದಾರೆ ಎಂಬುದು ನಾನು ಖಾತ್ರಿಪಡಿಸುತ್ತಿದ್ದೇನೆ’ ಎಂದರು ಜೂ ಎನ್​​ಟಿಆರ್.

ರಸ್ತೆ ಸುರಕ್ಷತೆ ಬಗ್ಗೆಯೂ ಮಾತನಾಡಿದ ಜೂ ಎನ್​​ಟಿಆರ್, ‘ರಸ್ತೆ ಅಪಘಾತದಿಂದ ಭಾರಿ ನಷ್ಟವನ್ನು ನಮ್ಮ ಕುಟುಂಬ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಮತ್ತು ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ನಾನು ಸಹ ಸ್ವತಃ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದೆ, ಜೀವವೇ ಹೋಗುವ ಸ್ಥಿತಿ ಅಂದು ಇತ್ತು. ರಸ್ತೆ ಸುರಕ್ಷತೆ ಮತ್ತು ಡ್ರೈವಿಂಗ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡ್ರೈವಿಂಗ್ ಮಾಡಬೇಕಾದರೆ ಕುಟುಂಬವನ್ನು ಮನಸ್ಸಿನಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಆಗ ಎಚ್ಚರಿಕೆ ಇರುತ್ತದೆ. ಜವಾಬ್ದಾರಿ ಎಂಬುದು ಒಳಗಿನಿಂದಲೇ ಬರಲಿ, ಅದು ಹೇರಿಕೆ ಆಗುವುದು ಬೇಡ’ ಎಂದಿದ್ದಾರೆ ಜೂ ಎನ್​​ಟಿಆರ್.

ಇನ್ನು ಅಭಿಮಾನಿಗಳ ಬಗ್ಗೆ ಮಾತನಾಡಿದ ಜೂ ಎನ್​​ಟಿಆರ್, ‘ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ. ಅಭಿಮಾನದ ಸಹೋದರರು ನೀವು. ನಿಮಗೆಲ್ಲರಿಗೂ ಕೋಟಿ-ಕೋಟಿ ಧನ್ಯವಾದ. ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ಜಾಗೃತೆಯಾಗಿ ಮನೆಗೆ ಹೋಗಿ, ನಮ್ಮ ಮನೆಯಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು, ನಿಮ್ಮ ಪ್ರೀತಿಗೆ, ಆಜನ್ಮ ಋಣದಲ್ಲಿರುತ್ತೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *