ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪ್ರತ್ಯೇಕ ದುರಂತಗಳಲ್ಲಿ ನಾಲ್ವರ ದುರ್ಮರಣ, ಮೂವರಿಗೆ ಗಾಯ – Kannada News | Bengaluru: Four Killed in Three Separate Accidents Across Whitefield and Kengeri; Three Critically Injured

ಅಪಘಾತಕ್ಕೀಡಾಗಿರುವ ಕಾರುImage Credit source: tv9

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ (Bengaluru) ಶನಿವಾರ ಪ್ರತ್ಯೇಕವಾಗಿ ಸಂಭವಿಸಿದ ಮೂರು ಭೀಕರ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಗಳನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದ ತಾಯಿ ಶಾಲಾ ಬಸ್‌ ಅಡಿ ಸಿಲುಕಿ ಮೃತಪಟ್ಟರೆ, ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬೈಕ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಖ್ಯಾಂಶಗಳು

  • ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾರ್ವಜನಿಕರ ಸಾವು.
  • ಮಗಳ ಕಣ್ಣೆದುರೇ ಶಾಲಾ ಬಸ್‌ಗೆ ಬಲಿಯಾದ ತಾಯಿ.
  • ಡಿವೈಡರ್‌ಗೆ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳ ಸಾವು.

ಮಗಳ ಕಣ್ಣೆದುರೇ ಶಾಲಾ ಬಸ್‌ಗೆ ಬಲಿಯಾದ ತಾಯಿ

ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಕರುಳು ಹಿಂಡುವಂಥ ಘಟನೆ ಸಂಭವಿಸಿದೆ. ಕಾಂತಾ ಎಂಬಾಕೆ ಮಗಳು ನೇಹಾಳನ್ನು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಕರೆದೊಯ್ಯುತ್ತಿದ್ದರು. ಮಾರತ್‌ಹಳ್ಳಿಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಹಠಾತ್ತನೆ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಕಾಂತಾ ಮೇಲೆ ಹಿಂಬದಿಯಿಂದ ಬರುತ್ತಿದ್ದ ಶಾಲಾ ಬಸ್ ಹರಿದಿದೆ. ಘಟನೆಯಲ್ಲಿ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ನೇಹಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತಾಯಿಯ ಭೀಕರ ಸಾವನ್ನು ಕಣ್ಣಾರೆ ಕಂಡ ಮಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.

ಡಿವೈಡರ್‌ಗೆ ಬೈಕ್ ಡಿಕ್ಕಿ: ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವು

ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಆರ್. ಡೆಂಟಲ್ ಕಾಲೇಜು ಬಳಿ ಮಧ್ಯರಾತ್ರಿ ಸುಮಾರು 2 ಗಂಟೆಗೆ ಮತ್ತೊಂದು ಭೀಕರ ಅಪಘಾತ ನಡೆದಿದೆ. ಮೈಸೂರು ಕಡೆಯಿಂದ ಬೆಂಗಳೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಅತುಲ್ ಮತ್ತು ಗೌರಿಶಂಕರ್ ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಡ್ಡಾದಿಡ್ಡಿ ಕಾರು ಚಾಲನೆಗೆ ಓರ್ವ ಬಲಿ, ಮೂವರಿಗೆ ಗಾಯ

ಮೈಸೂರು ರಸ್ತೆಯ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಬಳಿ ಅತಿ ವೇಗ ಮತ್ತು ಅಡ್ಡಾದಿಡ್ಡಿ ಚಾಲನೆಗೆ ಮತ್ತೊಂದು ಜೀವ ಬಲಿಯಾಗಿದೆ. ವೇಗವಾಗಿ ಬಂದ ಇಕೋ ಕಾರಿನ ಚಾಲಕ ರಸ್ತೆಯಲ್ಲಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಸುಖದೇವ್ ಎಂಬಾತ ಕಾರಿನಿಂದ ಹೊರಗೆ ಬಿದ್ದಿದ್ದು, ಅದೇ ಕಾರು ಆತನ ಮೇಲೆಯೇ ಉರುಳಿ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಎರಡು ಬೈಕ್‌ಗಳಲ್ಲಿದ್ದ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *