ಬೆಂಗಳೂರಿನಿಂದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಟ್ರಾಫಿಕ್: ಅಧಿಕಾರಿಗಳ ಸಬೂಬಿಗೆ ಜನ ಹೈರಾಣ – Kannada News | Nelamangala Traffic Chaos: Illegal Parking and Street Vendors Cause Trouble for Pedestrians and Motorists

ನೆಲಮಂಗಲ, ಮೇ 14: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಕೇಂದ್ರ ಹಾಗೂ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ (Nelamangala) ತಾಲೂಕು ಕೇಂದ್ರದಲ್ಲಿ ಸಂಚಾರ (Traffic) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಗರಸಭೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಪರಸ್ಪರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ವಾಹನ ಸವಾರರು ಮತ್ತು ಪಾದಚಾರಿಗಳ ಜೀವನಕ್ಕೆ ಕುತ್ತು ಬಂದೊದಗಿದೆ.

ಮುಖ್ಯಾಂಶಗಳು

  • ನೆಲಮಂಗಲದಲ್ಲಿ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಟ್ರಾಫಿಕ್ ಸಮಸ್ಯೆ
  • ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ದಶಕದ ಸಮಸ್ಯೆಗೆ ಮುಕ್ತಿ ಯಾವಾಗ ಎಂದ ಜನ?
  • ಅವೈಜ್ಞಾನಿಕ ಪಾರ್ಕಿಂಗ್​​​ನಿಂದಾಗಿ ಸವಾರರು ಹೈರಾಣು

ಇದನ್ನೂಓದಿ: ಲಾಂಗ್ ವೀಕೆಂಡ್ ಎಫೆಕ್ಸ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!

ನೆಲಮಂಗಲ ಟೌನ್​​ನಲ್ಲಿ ವಾಹನ ಸಂಚಾರ ಮಾಡುವುದು ಸವಾರರಿಗೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ಸಮಸ್ಯೆ ಕಣ್ಣ ಮುಂದೆ ಇದ್ದರು ಕೂಡ ಅಧಿಕಾರಿಗಳು ಕೆಸರೆರಚಾಟ ನಡೆಸಿದ್ದಾರೆ. ನೆಲಮಂಗಲ ಟೌನ್​ನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ಪಾದಚಾರಿಗಳಂತೂ ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವುದು ಹಾಗೂ ಫುಟ್‌ಪಾತ್‌ಗಳನ್ನು ರಸ್ತೆ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ.

ಅಧಿಕಾರಿಗಳ ಕೆಸರೆರಚಾಟ: ಹೇಳಿದ್ದಿಷ್ಟು

ಸಮಸ್ಯೆ ಕಣ್ಣಮುಂದೆಯೇ ಇದ್ದರೂ ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ನೆಲಮಂಗಲ ನಗರಸಭೆ ಅಧ್ಯಕ್ಷ ಗಣೇಶ್​​ರನ್ನು ಪ್ರಶ್ನಿಸಿದರೆ, ‘ನಾವು ಸಂಚಾರಿ ಪೊಲೀಸರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದೇವೆ’ ಎಂದು ಪೊಲೀಸರ ಮೇಲೆ ಹೊಣೆ ಹೊರಿಸಿದ್ದಾರೆ. ಇನ್ನು ಫುಟ್‌ಪಾತ್ ವ್ಯಾಪಾರಿಗಳ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸಭೆ ನಡೆಸಿದ್ದೇವೆ, ಒಂದೂವರೆ ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂಬ ಸಿದ್ಧ ಉತ್ತರ ನೀಡಿ ನುಣುಚಿಕೊಂಡರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!

‘ಇಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ, ಕೇಳುವವರಿಲ್ಲ. ಫುಟ್‌ಪಾತ್ ಮೇಲೆ ಅಂಗಡಿಗಳಿರುವುದರಿಂದ ನಮಗೆ ಓಡಾಡಲು ಜಾಗವೇ ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಇರುವ ಈ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *