ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ – Kannada News | Kempegowda’s Heritage: Devanahalli’s Grand Kote Venugopala Swamy Festival and Rare VajrabharaNa

ಬೆಂಗಳೂರು, ಫೆ.3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅದ್ದೂರಿ ರಥೋತ್ಸವ (Devanahalli Ratha Utsav) ಮತ್ತು ಅಪರೂಪದ ವಜ್ರಾಭರಣಗಳ ಜಾತ್ರೆ. ದೇವನಹಳ್ಳಿ ಎಂದರೆ ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲ, ಶತಮಾನಗಳ ಇತಿಹಾಸವಿರುವ ರಾಜ-ಮಹಾರಾಜರ ಕಾಲದ ವೈಭವಕ್ಕೂ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ಪೂರ್ವಿಕರು ಈ ದೇವಾಲಯಕ್ಕೆ ಬೆಲೆಕಟ್ಟಲಾಗದ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ರಾಜರ ಕಾಲ ಮುಗಿದ ನಂತರ ಈ ಆಭರಣಗಳು ಸರ್ಕಾರದ ಖಜಾನೆ ಸೇರಿವೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗಾಗಿ ದೇವನಹಳ್ಳಿಯ ತಾಲೂಕು ಕಚೇರಿಯಿಂದ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆಯಲ್ಲಿ ಈ ಆಭರಣಗಳನ್ನು ತರಲಾಗುತ್ತದೆ.

ಅಧಿಕಾರಿಗಳು ಪೆಟ್ಟಿಗೆಯನ್ನು ಭಕ್ತಿಯಿಂದ ಹೊತ್ತು ತಂದು ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದಂತೆ, ಉತ್ಸವ ಮೂರ್ತಿಗೆ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ತೊಡಿಸಲಾಯಿತು. ಈ ಸುಂದರ ದೃಶ್ಯವನ್ನು ಕಂಡ ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ಪುಳುಕಿತರಾದರು. ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುವ ಸಮಯದಲ್ಲಿ ಆಕಾಶದಲ್ಲಿ ಗರುಡ ಪಕ್ಷಿ ಪ್ರತ್ಯಕ್ಷವಾಗಿ, ರಥ ಮತ್ತು ದೇವಸ್ಥಾನದ ಮೇಲೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದು ಭಕ್ತರ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ವಜ್ರಾಭರಣಗಳ ಅಲಂಕಾರದಲ್ಲಿ ದೇವರು ರಥಾರೂಢನಾದ ನಂತರ, ಭಕ್ತರು ದವನ ಮತ್ತು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಈ ಜಾತ್ರೆಯ ಮೂಲಕ ದೇವನಹಳ್ಳಿಯ ಜನತೆ ಕೇವಲ ಪುಸ್ತಕಗಳಲ್ಲಿ ಓದಿದ್ದ ರಾಜ-ಮಹಾರಾಜರ ಕಾಲದ ಗತವೈಭವವನ್ನು ಕಣ್ಣಾರೆ ಕಂಡು ಸಂಭ್ರಮಿಸಿದರು. ಜಾತ್ರೆಯ ನಂತರ ಭಕ್ತರು ಬೂಂದಿ ಪಾಯಸ ಮತ್ತು ಮುದ್ದೆ ಕಾಳುಸಾರಿನ ಊಟವನ್ನು ಸವಿದರು.

ಇಲ್ಲಿದೆ ನೋಡಿ ವಿಡಿಯೋ:

ಈ ವಜ್ರಾಭರಣಗಳು ನಾಡಪ್ರಭು ಕೆಂಪೇಗೌಡರ ಕಾಲದ ಅತ್ಯಂತ ಅಮೂಲ್ಯವಾದ ಆಸ್ತಿಗಳಾಗಿವೆ. ಇವುಗಳ ಭದ್ರತೆಯ ದೃಷ್ಟಿಯಿಂದ ನಾವು ಇವುಗಳನ್ನು ಸರ್ಕಾರದ ಖಜಾನೆಯಲ್ಲಿ ಇರಿಸಿರುತ್ತೇವೆ. ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಮತ್ತು ದೇವರಿಗೆ ಅಲಂಕಾರ ಮಾಡಲು ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾಗುತ್ತದೆ. ಈ ಪರಂಪರೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ (AC) ದುರ್ಗಾಶ್ರೀ ಅವರು ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರು, ದೇವನಹಳ್ಳಿ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಥೋತ್ಸವದ ದಿನದಂದು ಮಾತ್ರ ಈ ಅಪರೂಪದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಹೊರತೆಗೆಯಲಾಗುತ್ತದೆ. ತಾಲೂಕು ಕಚೇರಿಯಿಂದ ದೇವಸ್ಥಾನದವರೆಗೆ ಶಸ್ತ್ರಸಜ್ಜಿತ ಪೊಲೀಸರ ಕಾವಲಿನಲ್ಲಿ ಇವುಗಳನ್ನು ತಂದು, ಉತ್ಸವ ಮೂರ್ತಿಗೆ ಅಲಂಕಾರ ಮಾಡಿದ ಬಳಿಕ ರಥೋತ್ಸವ ನೆರವೇರುತ್ತದೆ. ಕಾರ್ಯಕ್ರಮ ಮುಗಿದ ತಕ್ಷಣವೇ ಇವುಗಳನ್ನು ಮರಳಿ ಖಜಾನೆಗೆ ಸುರಕ್ಷಿತವಾಗಿ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ

ಗರುಡನ ಪ್ರದಕ್ಷಿಣೆ :

ಧಾರ್ಮಿಕ ನಂಬಿಕೆಗಳ ಪ್ರಕಾರ, ರಥೋತ್ಸವದ ಸಮಯದಲ್ಲಿ ಗರುಡ ಪಕ್ಷಿ ಕಾಣಿಸಿಕೊಳ್ಳುವುದು ಅತ್ಯಂತ ಶುಭ ಶಕುನ ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಭಾಗದಲ್ಲಿ ಉತ್ಸವ ಮೂರ್ತಿಗೆ ವಜ್ರಾಭರಣಗಳನ್ನು ತೊಡಿಸಿ, ರಥದಲ್ಲಿ ಪ್ರತಿಷ್ಠಾಪಿಸುವ ಸರಿಯಾದ ಸಮಯಕ್ಕೆ ಆಕಾಶದಲ್ಲಿ ಗರುಡ ಕಾಣಿಸಿಕೊಂಡಿದೆ. ಕೇವಲ ಹಾರಿ ಹೋಗದೆ, ರಥ ಮತ್ತು ದೇವಸ್ಥಾನದ ಗೋಪುರದ ಮೇಲೆ ಗರುಡನು ಮೂರು ಬಾರಿ ಪ್ರದಕ್ಷಿಣೆ ಹಾಕಿದೆ. ವೇಣುಗೋಪಾಲ ಸ್ವಾಮಿಯು ವಿಷ್ಣುವಿನ ಅವತಾರವಾಗಿದ್ದು, ವಿಷ್ಣುವಿನ ವಾಹನವಾದ ಗರುಡನೇ ಬಂದು ರಥೋತ್ಸವಕ್ಕೆ ಚಾಲನೆ ನೀಡಿದ್ದಾನೆ ಎಂಬುದು ಭಕ್ತರ ನಂಬಿಕೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಗರುಡ ಕಾಣಿಸಿಕೊಳ್ಳುವುದು ಇಲ್ಲಿನ ಒಂದು ವಿಶೇಷ ಸಂಪ್ರದಾಯ ಮತ್ತು ಪವಾಡದಂತೆ ನಡೆದುಕೊಂಡು ಬಂದಿದೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *