ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ 5 ನಗರ ಪಾಲಿಕೆಗಳಿಗೆ ಕೊನೆಗೂ ಹೊಸ ಲೋಗೋ ಅನಾವರಣಗೊಳಿಸಲಾಗಿದೆ.
ಇತ್ತೀಚೆಗೆ 2026-27ರ ಸಾಲಿನ ಬಜೆಟ್ ಮಂಡನೆ ಮಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ 5 ನಗರ ಪಾಲಿಕೆಗಳ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಖಡ್ಗ ಹಿಡಿದು ನಿಂತಿರುವ ಕೆಂಪೇಗೌಡರ ಚಿತ್ರಣ ಲೋಗೋದ ಪ್ರಮುಖ ಆಕರ್ಷಣೆ.
ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವಂತೆ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದ್ದು, ಕೊಂಚ ಹೊಸ ಸ್ಪರ್ಶ ನೀಡಲಾಗಿದೆ.
ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಪ್ರತಿಯೊಂದು ಪಾಲಿಕೆಗಳ ಲೋಗೋದಲ್ಲಿ ಕೆಂಪೇಗೌಡರ ಗೋಪುರವಿದ್ದು, ಪ್ರತ್ಯೇಕ ಬಣ್ಣಗಳನ್ನು ಹೊಂದಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳ ಲೋಗೋವನ್ನು ಚಿತ್ರಕಲಾ ಪರಿಷತ್ನಿಂದ ಸಿದ್ಧಪಡಿಸಲಾಗಿದೆ.
ಮಾರ್ಚ್ 20ರಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಜಿಬಿಎ ಸಭೆಯಲ್ಲಿ ಲೋಗೋವನ್ನು ಅಂತಿಮಗೊಳಿಸಲಾಗಿತ್ತು.
