ಬೆಂಗಳೂರು, ಮೇ 5: ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ (Biocon) ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಮ್ಮ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ತಮ್ಮ ಸಹೋದರನ ಮಗಳಾದ (Niece) ಕ್ಲೇರ್ ಮಜುಂದಾರ್ (Claire Mazumdar) ಅವರನ್ನು ಬಯೋಕಾನ್ ಸಾಮ್ರಾಜ್ಯವನ್ನು ಮುನ್ನಡೆಸಲು ಆಯ್ಕೆ ಮಾಡಿದ್ದಾರೆ. ಮುಂದುವರಿದ ಜೈವಿಕಶಾಸ್ತ್ರ ಹಾಗೂ ಎಐ ಇನ್ನೋವೇಶನ್ಗಳಿಗೆ ಹೊಂದಿಕೆಯಾಗಲು ಬಯೋಕಾನ್ ಕಂಪನಿ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಈ ಜವಾಬ್ದಾರಿ ಹಸ್ತಾಂತರ ಆಗಲಿರುವುದು ಗಮನಾರ್ಹ. ತಮ್ಮ ಸೋದರತ್ತೆ ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಕ್ಲೇರ್ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲರಾ ಎನ್ನುವುದು ಕುತೂಹಲದ ಸಂಗತಿ.
ಕ್ಲೇರ್ ಮಜುಂದಾರ್ ಯಾರು?
37 ವರ್ಷದ ಕ್ಲೇರ್ ಮಜುಂದಾರ್ ಪ್ರಸ್ತುತ ಅಮೆರಿಕ ಮೂಲದ ‘ಬಿಕಾರಾ ಥೆರಪಿಟಿಕ್ಸ್’ (Bicara Therapeutics) ಎಂಬ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಯೋಕಾನ್ನಿಂದಲೇ ಆರಂಭವಾದ ಒಂದು ಸಂಸ್ಥೆಯಾಗಿದೆ.
ಮಗೆ ಮಕ್ಕಳಿಲ್ಲದ ಕಾರಣ, ಕಂಪನಿಯ ಭವಿಷ್ಯ ಮತ್ತು ಮಾಲೀಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕ್ಲೇರ್ ಅವರೇ ಸೂಕ್ತ ವ್ಯಕ್ತಿ ಎಂದು ಕಿರಣ್ ಅವರು ನಿರ್ಧರಿಸಿದ್ದಾರೆ. ಕ್ಲೇರ್ ಅವರ ನಾಯಕತ್ವ ಮತ್ತು ಜಾಗತಿಕ ಮಟ್ಟದಲ್ಲಿ ಬಯೋಟೆಕ್ ವ್ಯವಹಾರವನ್ನು ಬೆಳೆಸಿದ ರೀತಿಗೆ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು
ಕ್ಲೇರ್ ಮಜುಂದಾರ್ ಅವರ ಶೈಕ್ಷಣಿಕ ಹಿನ್ನೆಲೆ
ಕ್ಲೇರ್ ಅವರು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಂತಹ ವಿಶ್ವವಿಖ್ಯಾತ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಪದವಿಗಳನ್ನು ಪಡೆದಿದ್ದಾರೆ. ಕ್ಲೇರ್ ಅವರ ಕುಟುಂಬದ ಇತರ ಸದಸ್ಯರೂ ಕೂಡ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಸಹೋದರ ಎರಿಕ್ ಮಜುಂದಾರ್ ಅವರು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಐ ತಜ್ಞರಾಗಿದ್ದಾರೆ. ಪತಿ ಥಾಮಸ್ ರಾಬರ್ಟ್ಸ್ ಅವರು ಅಮೆರಿಕದ ಪ್ರಮುಖ ಕ್ಯಾನ್ಸರ್ ತಜ್ಞರಲ್ಲಿ ಒಬ್ಬರೆನಿಸಿದ್ದಾರೆ.
ಬಯೋಕಾನ್ ಸಂಸ್ಥೆಯು ಈಗ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಜೈವಿಕ ಔಷಧಗಳ ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ಕ್ಲೇರ್ ಅವರ ತಾಂತ್ರಿಕ ಜ್ಞಾನವು ಕಂಪನಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಕಿರಣ್ ಮಜುಂದಾರ್ ಶಾ (73) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಬಯೋಕಾನ್ ಸ್ಥಾಪಿಸಿ ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಯಾಗಿ ಬೆಳೆಸಿದ್ದಾರೆ. ಸ್ವರ್ಗಸ್ಥರಾಗಿರುವ ಅವರ ಪತಿ ಜಾನ್ ಶಾ ಅವರು ಈ ಹಿಂದೆ ಸಮೂಹದ ಉಪಾಧ್ಯಕ್ಷರಾಗಿದ್ದರು.
ಇದನ್ನೂ ಓದಿ: ದೆಹಲಿಯಲ್ಲಿ 9 ಮಂದಿ ಬಲಿತೆಗೆದ ಎಸಿ ಸ್ಫೋಟ; ಏರ್ ಕಂಡೀಷನರ್ ಸ್ಫೋಟಕ್ಕೆ ಕಾರಣವೇನು, ನಿಯಂತ್ರಣ ಹೇಗೆ?
ಗಮನಿಸಬೇಕಾದ ಸಂಗತಿ ಎಂದರೆ, ಕ್ಲೇರ್ ಅವರು ತತ್ಕ್ಷಣಕ್ಕೆ ಬಯೋಕಾನ್ ಛೇರ್ಮನ್ ಸ್ಥಾನ ಪಡೆಯುವುದಿಲ್ಲ. ಅವರು ಆ ಸ್ಥಾನ ನಿಭಾಯಿಸಲು ಶಕ್ತರಾಗುವವರೆಗೂ ಕಿರಣ್ ಮಜುಂದಾರ್ ಅವರು ಮಾರ್ಗದರ್ಶನ ಮಾಡುತ್ತಾರೆ. ಆ ಬಳಿಕವಷ್ಟೇ ಅಧಿಕೃತವಾಗಿ ಕ್ಲೇರ್ ಅವರು ಬಯೋಕಾನ್ ಛೇರ್ಮನ್ ಆಗಬಹುದು ಎನ್ನಲಾಗಿದೆ. ಕಿರಣ್ ಮಜುಂದಾರ್ ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
‘ಈಗಲೇ ನಾನು ಬಯೋಕಾನ್ನ ಜವಾಬ್ದಾರಿ ಬಿಡುತ್ತಿಲ್ಲ. ಕ್ಲೇರ್ ಅವರು ನನ್ನ ಸ್ಥಾನಕ್ಕೆ ಸರಿಯಾದ ಸಮಯದಲ್ಲಿ ಬರುತ್ತಾರೆ’ ಎಂದು ಮಜುಂದಾರ್ ಎಕ್ಸ್ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
Claire will transition into my role at the right time so not planning to hang up my boots just yet!! https://t.co/pidlRfRZRs
— Kiran Mazumdar-Shaw (@kiranshaw) May 5, 2026
ಈ ಘೋಷಣೆಯು ಬಯೋಕಾನ್ ಸಂಸ್ಥೆಯಲ್ಲಿ ಹೊಸ ನಾಯಕತ್ವದ ಬದಲಾವಣೆಗೆ ಮುನ್ನುಡಿ ಬರೆದಿದೆ. ಬಯೋಕಾನ್ ಕಂಪನಿ ಮಾತ್ರವಲ್ಲ, ಆ ಗ್ರೂಪ್ನ ಎಲ್ಲಾ ಕಂಪನಿಗಳಲ್ಲೂ ನಾಯಕತ್ವ ಬದಲಾವಣೆಗಳಾಗುತ್ತಿವೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 12:09 pm, Tue, 5 May 26