ಕಲಿತಾ ಮಾಝಿ ಮತ್ತು ರತ್ನಾ ದೇಬನಾಥ್
ಕೋಲ್ಕತ್ತಾ, ಮೇ 05: ಪಶ್ಚಿಮ ಬಂಗಾಳ ವಿಧಾನಸಭಾ ಫಲಿತಾಂಶ ಹೊರಬಿದ್ದಿದ್ದು, ಅಡಳಿತಾರೂಢ ಟಿಎಂಸಿ ಧೂಳೀಪಟವಾಗಿದ್ದರೆ ಬಿಜೆಪಿ 200ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಪ್ರಚಂಡ ಗೆಲುವು ಸಾಧಿಸಿದೆ. ಈ ನಡುವೆ ಭಾರತೀಯ ಜನತಾ ಪಕ್ಷದಿಂದ ಗೆದ್ದ ಕೆಲ ಜನ ಸಾಮಾನ್ಯ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ. ಆಸ್ಗ್ರಾಮ ಕ್ಷೇತ್ರದಿಂದ ಸ್ಫರ್ಧಿಸಿದ್ದ ಮನೆ ಕೆಲಸ ಮಾಡುವ ಮಹಿಳೆ ಗೆದ್ದು ಬೀಗಿದ್ದರೆ, ಅತ್ತ ಪಾನಿಹಾಟಿಯಲ್ಲಿ ಕಣಕ್ಕಿಳಿದಿದ್ದ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಯೂ ವಿಜಯಪತಾಕೆ ಹಾರಿಸಿರೋದು ದೇಶದ್ಯಾಂತ ಸುದ್ದಿಯಾಗಿದೆ.
ಶಾಸಕಿಯಾದ ಮನೆ ಕೆಲಸದಾಕೆ
ಮನೆ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 2,500 ರೂ. ಆದಾಯ ಹೊಂದಿದ್ದ ಕಲಿತಾ ಮಾಝಿ ಆಸ್ಗ್ರಾಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ರಾಜಕೀಯಕ್ಕೆ ಬರಲು ಮುನ್ನ ನಾಲ್ಕು ಮನೆಗಳಲ್ಲಿ ಗೃಹಕಾರ್ಯ ನಿರ್ವಹಿಸುತ್ತಿದ್ದರು. ಜನಾಧಾರಿತ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದ ಅವರು 1,07,692 ಮತಗಳನ್ನು ಪಡೆದು ಎದುರಾಳಿ ಶ್ಯಾಮ ಪ್ರಸನ್ನ ಲೋಹಾರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದಾರೆ. 2021ರ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಇವರು, ತೃಣಮೂಲ ಕಾಂಗ್ರೆಸ್ನ ಅಭೇದಾನಂದ ಥಾಂಡರ್ ವಿರುದ್ಧ ಸೋತಿದ್ದರು. ಆದರೂ ಬಿಜೆಪಿ ಮತ್ತೆ ಈ ಬಾರಿಯೂ ಅವರಿಗೇ ಟಿಕೆಟ್ ನೀಡಿದ್ದು, ಕಲಿತಾ ಮಾಝಿ ಅವರ ಸ್ಥಳೀಯ ಸಂಪರ್ಕವೇ ಗೆಲುವಿನ ಹಿಂದಿನ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿ ಈಗ MLA!
ಆರ್ಜಿ ಕಾರ್ ಮೆಡಿಕಲ್ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆ ತಾಯಿ, ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಪಾನಿಹಾಟಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ. ರತ್ನಾ ದೇಬನಾಥ್ ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ತೀರ್ಥಂಕರ ಘೋಷ್ ಅವರನ್ನು 28,836 ಮತಗಳ ಅಂತರದಿಂದ ಸೋಲಿಸಿದ್ದು, ಒಟ್ಟು 87,977 ಮತಗಳು ಇವರಿಗೆ ಬಿದ್ದಿವೆ. ಪ್ರತಿಸ್ಪರ್ಧಿ ಘೋಷ್ 59,141 ವೋಟ್ಗಳನ್ನು ಪಡೆದಿದ್ದಾರೆ.
ಸಂದೇಶಖಾಲಿ ಹಿಂಸಾಚಾರ ಪ್ರಕರಣದ ವೇಳೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದ ರೇಖಾ ಪಾತ್ರಾ ಕೂಡ ಟಿಎಂಸಿ ಅಭ್ಯರ್ಥಿಯನ್ನು ಮಣಿಸಿ ಗೆಲುವಿನ ನಗಾರಿ ಬಾರಿಸಿದ್ದಾರೆ. ಪಾತ್ರಾ 1,00,207 ಮತಗಳನ್ನು ಪಡೆದರೆ, ಸರ್ಕಾರ್ 94,786 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರ 5,421 ಮತಗಳು. ಒಟ್ಟಾರೆಯಾಗಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ 206 ಸ್ಥಾನಗಳನ್ನು ಗೆದ್ದು ಬಹುಮತ ಪಡೆಯುವ ಮೂಲಕ 15 ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ತೆರೆ ಎಳೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 12:10 pm, Tue, 5 May 26