ಬೆಂಗಳೂರು, ಆ.10 : ರಾಜಧಾನಿಯಲ್ಲಿ ಆರೋಗ್ಯ ಇಲಾಖೆ ಬೀದಿ ಬದಿ ಆಹಾರಗಳು ಹಾಗೂ 5 ಸ್ಟಾರ್ ಹೋಟೆಲ್ಗಳ ಮೇಲೆ ದಾಳಿಯನ್ನು ಮಾಡಿರುವ ವೇಳೆ ಮತ್ತೊಂದು ಮಹತ್ವದ ವರದಿಯೊಂದನ್ನು ನೀಡಲಾಗಿದೆ. ಬೆಂಗಳೂರಿನ ಮಕ್ಕಳಲ್ಲಿ ಜಠರಗಾತ್ರ ಉರಿಯೂತ (Inflammatory Bowel Disease – IBD) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ದಶಕದಿಂದ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ರೋಗದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಹಾಗೂ ಸುಧಾರಿತ ತಪಾಸಣಾ ಸೌಲಭ್ಯಗಳು ಈ ಪ್ರಕರಣಗಳನ್ನು ಬೇಗನೇ ಪತ್ತೆ ಹಚ್ಚಲು ನೆರವಾಗುತ್ತಿವೆಯಾದರೂ, ನಿಜವಾದ ರೋಗಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಕಳೆದ ಆರು ತಿಂಗಳಲ್ಲಿ ಮಕ್ಕಳ IBD ಪ್ರಕರಣಗಳಲ್ಲಿ 12 ಪ್ರತಿಶತ ಹೆಚ್ಚಳ ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಒಂದೇ ಸಂಸ್ಥೆಯಲ್ಲಿ 886 ಮಕ್ಕಳಿಗೆ IBD ಇರುವುದು ದೃಢಪಟ್ಟಿದೆ. ರೆನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯ ಮಕ್ಕಳ ಜಠರಗಾತ್ರ ತಜ್ಞೆ ಡಾ. ಲಾವೇಣ್ಯ ಆರ್‌ಪಿ ಅವರ ಪ್ರಕಾರ, ದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ಮಕ್ಕಳ IBD ಗಮನಾರ್ಹವಾಗಿ ಹೆಚ್ಚಿದ್ದು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಇದು ಪತ್ತೆಯಾಗುತ್ತಿದೆ. ಡಾ. ಶಿವಕುಮಾರ್ ಸಂಬರ್ಗಿ ಅವರ ಪ್ರಕಾರ, ನಗರ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದ್ದು, ಅವರು ಪ್ರತಿ ವಾರ 3 ರಿಂದ 4 ಶಂಕಿತ ಪ್ರಕರಣಗಳನ್ನು ನೋಡುತ್ತಿದ್ದಾರೆ.
ಏರಿಕೆಗೆ ಪ್ರಮುಖ ಕಾರಣಗಳೇನು?
ಆಹಾರ ಪದ್ಧತಿ ಬದಲಾವಣೆ: ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಸಕ್ಕರೆಯುಕ್ತ ಪಾನೀಯಗಳು ಹಾಗೂ ಪ್ಯಾಕ್ ಮಾಡಿದ ಜಂಕ್ ಫುಡ್ ಬಳಕೆಯ ಹೆಚ್ಚಳ.
ದೈಹಿಕ ಚಟುವಟಿಕೆ ಕೊರತೆ: ಮಕ್ಕಳಿಗೆ ದೈಹಿಕ ವ್ಯಾಯಾಮ ಹಾಗೂ ಆಟೋಟಗಳ ಕೊರತೆ ಮತ್ತು ಹೊಟ್ಟೆಯ ಜೀರ್ಣಾಂಗ ಸೂಕ್ಷ್ಮಜೀವಿಗಳಲ್ಲಿ ಉಂಟಾಗುವ ಬದಲಾವಣೆಗಳು.
ನಗರೀಕರಣ ಮತ್ತು ಮಾಲಿನ್ಯ: ಕ್ಷಿಪ್ರ ನಗರೀಕರಣ, ವಾಯು ಮಾಲಿನ್ಯ, ಜೀವನಶೈಲಿ ಬದಲಾವಣೆ ಹಾಗೂ ಪರೋಕ್ಷ ಧೂಮಪಾನ ಅಪಾಯವನ್ನು ಹೆಚ್ಚಿಸುತ್ತಿವೆ.
ಪೋಷಕರಿಗೆ ವೈದ್ಯರ ಎಚ್ಚರಿಕೆ:
ಮಕ್ಕಳಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಸಾಮಾನ್ಯ ಹೊಟ್ಟೆಯ ಸೋಂಕು ಎಂದು ನಿರ್ಲಕ್ಷಿಸದೇ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ:
ಸುದೀರ್ಘ ದಿನಗಳ ಹೊಟ್ಟೆ ನೋವು
ನಿರಂತರ ಅತಿಸಾರ/ಭೇದಿ ಮತ್ತು ಮಲದಲ್ಲಿ ರಕ್ತ ಬೀಳುವುದು
ನಿರೀಕ್ಷಿತ ಎತ್ತರ/ತೂಕ ಹೆಚ್ಚಾಗದಿರುವುದು ಮತ್ತು ತೂಕ ನಷ್ಟ
ಹಸಿವು ಕಡಿಮೆಯಾಗುವುದು.
ಇದನ್ನೂ ಓದಿ: ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು
ಸರ್ಕಾರದ ಕ್ರಮಕ್ಕೆ ಮೆಚ್ಚುಗೆ:
ಶಾಲಾ ಆವರಣಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟ ಹಾಗೂ ಜಾಹೀರಾತುಗಳನ್ನು ನಿರ್ಬಂಧಿಸಲು ಮತ್ತು ಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವೈದ್ಯರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
