ಬೆಂಗಳೂರಿನ ರಸ್ತೆಗಳಲ್ಲಿ ‘ವಿಂಟೇಜ್‌’ ವೈಭವ: ಜಾಗತಿಕ ಮಟ್ಟದಲ್ಲಿ ಧೂಳೆಬ್ಬಿಸಿದ ಜಾವಾ-ಯೆಜ್ಡಿ ಬೈಕ್ ಪ್ರೇಮಿಗಳ ಅದ್ದೂರಿ ಹಬ್ಬ! – Kannada News | International Jawa Yezdi Day Celebrated in Bengaluru: 7500 Riders Join Global Vintage Bike Rally

ಬೆಂಗಳೂರು, ಜುಲೈ 13: ಮೋಟಾರ್‌ಸೈಕಲ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಹಾಗೂ ಹೆಮ್ಮೆಯ ಸಂಪ್ರದಾಯ ಹೊಂದಿರುವ ‘ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ’ವನ್ನು ಭಾನುವಾರ (ಜು 12) ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ನೂರಾರು ಬೈಕ್ ಪ್ರೇಮಿಗಳು ಒಂದೆಡೆ ಸೇರಿ 24ನೇ ಆವೃತ್ತಿಯ ಈ ಸಡಗರಕ್ಕೆ ಸಾಕ್ಷಿಯಾದರು. ನಗರದ ರಿಚ್‌ಮಂಡ್‌ ಟೌನ್‌ನಲ್ಲಿರುವ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ಮೈದಾನಕ್ಕೆ ನೂರಾರು ರೈಡರ್‌ಗಳು ತಮ್ಮ ನೆಚ್ಚಿನ ಬೈಕ್‌ಗಳೊಂದಿಗೆ ಸವಾರಿ ಮಾಡಿಕೊಂಡು ಬಂದು ಜಮಾಯಿಸಿದ್ದರು.

ಇಡೀ ದಿನ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರದರ್ಶನಕ್ಕಿಟ್ಟಿದ್ದ ಹಳೆಯ ಕ್ಲಾಸಿಕ್‌ ಯೆಜ್ಡಿ ಬೈಕ್‌ಗಳನ್ನು ಕಂಡು ಹಿರಿಯರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಯುವ ಪೀಳಿಗೆಯೂ ಅಷ್ಟೇ ಕುತೂಹಲದಿಂದ ಬೈಕ್‌ಗಳನ್ನು ವೀಕ್ಷಿಸಿ ಪುಳಕಿತಗೊಂಡಿತು. ಸವಾರರು ಮತ್ತು ಸಾರ್ವಜನಿಕರು ಬೈಕ್‌ಗಳ ಜೊತೆ ಸೆಲ್ಫಿ ತೆಗೆದುಕೊಂಡು, ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಸಣ್ಣ ಗುಂಪಿನಿಂದ ಜಾಗತಿಕ ಮಟ್ಟಕ್ಕೆ ಬೆಳೆದ ಚಳುವಳಿ

ಕೆಲವೇ ಕೆಲವು ಜಾವಾ ಮತ್ತು ಯೆಜ್ಡಿ ಬೈಕ್ ಮಾಲೀಕರು ಒಟ್ಟಾಗಿ ಆರಂಭಿಸಿದ್ದ ಈ ಆಚರಣೆ, ಇಂದು ಜಾಗತಿಕ ಮಟ್ಟದ ಬೃಹತ್ ಹಬ್ಬವಾಗಿ ರೂಪಾಂತರಗೊಂಡಿದೆ. ಬೈಕಿಂಗ್ ಪರಂಪರೆ ಹಾಗೂ ಸಮುದಾಯದ ಮೇಲಿನ ಅಪಾರ ಪ್ರೀತಿಯು ಹಲವು ತಲೆಮಾರುಗಳ ರೈಡರ್‌ಗಳನ್ನು ಒಂದೇ ಸೂರಿನಡಿ ತಂದು ಬೆಸೆಯುವಂತೆ ಮಾಡಿದೆ.

ಪ್ರತಿ ವರ್ಷ ಜುಲೈ ತಿಂಗಳ ಎರಡನೇ ಭಾನುವಾರದಂದು ಈ ವಿಶೇಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದಶಕಗಳ ಇತಿಹಾಸವಿರುವ ಹಳೆಯ ವಿಂಟೇಜ್ ಜಾವಾ ಮತ್ತು ಯೆಜ್ಡಿ ಬೈಕ್‌ಗಳು, ಇಂದಿನ ಆಧುನಿಕ ತಂತ್ರಜ್ಞಾನದ ಬೈಕ್‌ಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ರಸ್ತೆಗಿಳಿಯುವುದೇ ಈ ದಿನದ ಹೈಲೈಟ್. ಇದು ಕೇವಲ ಬೈಕ್‌ಗಳ ಪ್ರದರ್ಶನವಾಗಿರದೆ, ಎರಡು ತಲೆಮಾರುಗಳ ನಡುವಿನ ಬೈಕಿಂಗ್ ಪ್ರೇಮದ ಅದ್ಭುತ ಕೊಂಡಿಯಾಗಿದೆ.

ಗಡಿ ದಾಟಿದ ಸಂಭ್ರಮ: 7,500ಕ್ಕೂ ಹೆಚ್ಚು ಸವಾರರ ಭಾಗಿ

ಈ ವರ್ಷದ ಆಚರಣೆಯು ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ 150ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ 40ಕ್ಕೂ ಹೆಚ್ಚು ಬೈಕ್ ಕ್ಲಬ್‌ಗಳು ಮತ್ತು ಬರೋಬ್ಬರಿ 7,500ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡು ಹೊಸ ದಾಖಲೆ ಬರೆದಿದ್ದಾರೆ.

ಈ ಸಡಗರ ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ, ದೇಶದ ಗಡಿಗಳನ್ನು ದಾಟಿ ವಿಶ್ವದ 11 ದೇಶಗಳಿಗೂ ಪಸರಿಸಿದೆ. ವಿದೇಶಿ ರೈಡರ್‌ಗಳು ಸ್ಥಳೀಯ ರ‍್ಯಾಲಿಗಳು, ಸಮುದಾಯ ಕೂಟಗಳು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಜಾವಾ ಸಮುದಾಯಗಳು ಭಾರತದ ರೈಡಿಂಗ್ ಕ್ಲಬ್‌ಗಳೊಂದಿಗೆ ಡಿಜಿಟಲ್ ಹಾಗೂ ಪ್ರತ್ಯಕ್ಷವಾಗಿ ಕೈಜೋಡಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ಕೇವಲ ರೈಡಿಂಗ್ ಮಾಡುವುದಷ್ಟೇ ಅಲ್ಲದೆ, ತಲೆಮಾರುಗಳಿಂದ ಸಾಗಿಬಂದ ಸ್ನೇಹ, ರೋಮಾಂಚಕ ನೆನಪುಗಳು ಮತ್ತು ಸವಾರಿಯ ಕಥೆಗಳನ್ನು ರೈಡರ್‌ಗಳು ಇಲ್ಲಿ ಹಂಚಿಕೊಂಡಿದ್ದಾರೆ.

ಇದು ಸವಾರರಿಂದ, ಸವಾರರಿಗಾಗಿಯೇ ಇರುವ ಹಬ್ಬ

ಈ ಐತಿಹಾಸಿಕ ಆಚರಣೆಯ ಯಶಸ್ಸಿನ ಕುರಿತು ಮಾತನಾಡಿದ ‘ಕ್ಲಾಸಿಕ್ ಲೆಜೆಂಡ್ಸ್’ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಸವಾರರ ಸಣ್ಣ ಗುಂಪೊಂದು ತಮ್ಮ ನೆಚ್ಚಿನ ಮೋಟಾರ್‌ಸೈಕಲ್‌ಗಳನ್ನು ಸಂಭ್ರಮಿಸಲು ಶುರು ಮಾಡಿದ ಪ್ರಯತ್ನವಿದು. ಇಂದು ಇದು ದೇಶ-ವಿದೇಶಗಳ ಗಡಿಗಳನ್ನು ದಾಟಿ, ತಲೆಮಾರುಗಳನ್ನು ಮೀರಿದ ಜಾಗತಿಕ ಸಂಪ್ರದಾಯವಾಗಿ ಬೆಳೆದು ನಿಂತಿದೆ. ಈ ಹಬ್ಬದ ಸಂಪೂರ್ಣ ಕ್ರೆಡಿಟ್ ಬೈಕ್ ಸವಾರರಿಗೆ ಸಲ್ಲುತ್ತದೆ. ಪ್ರತಿಯೊಂದು ರೈಡ್, ಪ್ರತಿ ಕೂಟ ಮತ್ತು ಹಂಚಿಕೊಂಡ ಪ್ರತಿಯೊಂದು ಕಥೆಯೂ ಈ ಹೆಮ್ಮೆಯ ಪರಂಪರೆಯನ್ನು ಜೀವಂತವಾಗಿರಿಸಿದೆ. ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿರುವ ಈ ಚಳುವಳಿಯ ಭಾಗವಾಗಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಲಾಸಿಕ್ ಬೈಕ್‌ಗಳ ಮರುಜೀವಕ್ಕೆ ಮುನ್ನುಡಿ

ಭಾರತೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿಷ್ಠಿತ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳನ್ನು ಮತ್ತೆ ವೈಭವದಿಂದ ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ ‘ಕ್ಲಾಸಿಕ್ ಲೆಜೆಂಡ್ಸ್’ ಕಂಪನಿಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಜಾವಾ (Jawa), ಯೆಜ್ಡಿ (Yezdi) ಮತ್ತು ಬಿಎಸ್‌ಎ (BSA) ನಂತಹ ಐತಿಹಾಸಿಕ ಬ್ರ್ಯಾಂಡ್‌ಗಳ ಮಾಲೀಕತ್ವವನ್ನು ಹೊಂದಿದೆ. ಗ್ರಾಹಕರಿಗೆ ಅತ್ಯುತ್ತಮ ಬೈಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ, ನೈಜ ಮೋಟಾರ್‌ಸೈಕ್ಲಿಂಗ್ ಜೀವನಶೈಲಿಯ ಅನುಭವವನ್ನು ಒದಗಿಸುವುದು ಹಾಗೂ ಕ್ಲಾಸಿಕ್ ಬೈಕ್‌ಗಳ ಮಾರುಕಟ್ಟೆಗೆ ಹೊಸ ಚೈತನ್ಯ ತುಂಬುವುದು ಕಂಪನಿಯ ಮುಖ್ಯ ಗುರಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *