ಬೆಂಗಳೂರು, ಫೆಬ್ರವರಿ 26: ಬೆಂಗಳೂರು (Bengaluru) ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ.
ವಿಶೇಷವಾಗಿ, ಕೆಲವು ನೈಜೀರಿಯನ್ ಹಾಗೂ ಬಾಂಗ್ಲಾ ಮೂಲದ ವಲಸಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸದ್ಯ ಅಕ್ರಮವಾಗಿ ನೆಲೆಸಿರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
‘ಯಾವ ದೇಶದಿಂದ ಬಂದಿದ್ದಾರೆ? ಯಾವಾಗ ನಗರಕ್ಕೆ ಪ್ರವೇಶಿಸಿದ್ದಾರೆ? ಯಾರು ಕರೆತಂದಿದ್ದಾರೆ? ವೀಸಾ ಹಾಗೂ ಪಾಸ್‌ಪೋರ್ಟ್ ಮಾನ್ಯತೆಯ ಸ್ಥಿತಿ ಏನು?’ ಎಂಬ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಗತ್ಯವಿದ್ದಲ್ಲಿ ಸಂಬಂಧಿತ ಕೇಂದ್ರ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ
ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ವಿರುದ್ಧ ಈ ಹಿಂದೆಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 2026 ಜನವರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 26ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇವರು ನಕಲಿ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ಬಳಸಿ ನಗರದ ಸ್ಕ್ರ್ಯಾಪ್ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
2025ರ ನವೆಂಬರ್ನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 14 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಅವರಿಂದ 7.7 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಲ್ಲಿ ನೈಜೀರಿಯಾ ಮೂಲದ ಮಹಿಳೆಯೂ ಸೇರಿದ್ದು, ಆಕೆ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಳು.
