ಇಸ್ರೋ (ಸಾಂದರ್ಭಿಕ ಚಿತ್ರ)Image Credit source: TV9 Network
ಬೆಂಗಳೂರು, ಜುಲೈ 7: ರಾಜಧಾನಿ ಬೆಂಗಳೂರಿನ (Bengaluru) ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಧಾನ ಕಚೇರಿಗೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಇಸ್ರೋ ಸಂಸ್ಥೆಗೆ ಬಂದಿರುವ ಮೂರನೇ ಬಾಂಬ್ ಬೆದರಿಕೆ ಇಮೇಲ್ ಇದಾಗಿದೆ. ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಇಸ್ರೋ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಬಂದಿದ್ದ ಈ ಇಮೇಲ್ ಗಮನಿಸಿದ್ದು, ಅದರಲ್ಲಿ ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಅಪರಿಚಿತ ಆರೋಪಿ ಉಲ್ಲೇಖಿಸಿದ್ದ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದೀರ್ಘ ಶೋಧದ ಬಳಿಕ ಪೊಲೀಸರು ನಿರಾಳ
ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್ (BDDS), ಶ್ವಾನ ದಳ, ಸಿಐಎಸ್‌ಎಫ್ (CISF) ಮತ್ತು ಸಂಜಯನಗರ ಠಾಣಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಅಂತರಿಕ್ಷ ಭವನ ಸೇರಿದಂತೆ ಇಡೀ ಕ್ಯಾಂಪಸ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಇದರೊಂದಿಗೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಕೇಂದ್ರದಲ್ಲೂ ಪೊಲೀಸರು ಪರಿಶೀಲನೆ ನಡೆಸಿದರು. ಮಧ್ಯಾಹ್ನದವರೆಗೆ ನಡೆದ ಸುದೀರ್ಘ ಶೋಧದ ಬಳಿಕ ಯಾವುದೇ ಆಕ್ಷೇಪಾರ್ಹ ವಸ್ತು ಪತ್ತೆಯಾಗದ ಕಾರಣ ಇದೊಂದು ಹುಸಿ ಇಮೇಲ್ ಎಂದು ಘೋಷಿಸಲಾಯಿತು.
ಇದಕ್ಕೂ ಮುನ್ನ ಜುಲೈ 2 ರಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಕಚೇರಿಗೆ ಇಮೇಲ್ ಕಳುಹಿಸಿದ್ದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಿಶಾಂತ್ ತ್ಯಾಗಿ (36) ಎಂಬಾತನನ್ನು ಜುಲೈ 3 ರಂದು ಬಂಧಿಸಲಾಗಿತ್ತು. ಆದರೆ, ಶುಕ್ರವಾರ ತಮಿಳು ಭಾಷೆಯಲ್ಲಿ ಬಂದಿದ್ದ ಎರಡನೇ ಇಮೇಲ್ ಮತ್ತು ಭಾನುವಾರ ಬಂದಿರುವ ಮೂರನೇ ಇಮೇಲ್‌ಗೂ ಬಂಧಿತ ತ್ಯಾಗಿಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಈ ಮೂರೂ ಇಮೇಲ್ ಐಡಿಗಳು ಬೇರೆ ಬೇರೆಯಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ. ಸಂಜಯನಗರ ಪೊಲೀಸರು ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾದ ಬಾಂಬ್ ಬೆದರಿಕೆ
ಇಸ್ರೋ ಸಂಸ್ಥೆಯ ಬೆನ್ನಲ್ಲೇ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ತಮಿಳುನಾಡಿನಿಂದ ‘ಉದಯ್ ಸೇತುಪತಿ’ ಎಂಬ ಹೆಸರಿನ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ನಾಲ್ಕು ಆರ್‌ಡಿಎಕ್ಸ್ (RDX) ಐಇಡಿ ಬಾಂಬ್‌ಗಳನ್ನು ಇಟ್ಟು ಮಧ್ಯಾಹ್ನ 2 ಗಂಟೆಗೆ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಪೋಕ್ಸೊ (POCSO) ಪ್ರಕರಣದ ಆರೋಪಿಗಳಾದ ಆರ್.ಜೆ. ಶರಣ್ ಜಯರಾಮ್ ಮತ್ತು ಜಲ್ಲಿಕಟ್ಟು ಜ್ಯೂಲಿಯನ್ ಎಂಬುವವರನ್ನು ಬಿಡುಗಡೆ ಮಾಡಬೇಕು, ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂತಹ ಆರೋಪಿಗಳಲ್ಲ ಎಂದು ಇಮೇಲ್‌ನಲ್ಲಿ ಆಗ್ರಹಿಸಲಾಗಿತ್ತು.
ಇದನ್ನೂ ಓದಿ: ದುರಂತ್ ಎಕ್ಸ್ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಇಮೇಲ್ ಕಂಡು ಬೆದರಿದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸರು, ಬಾಂಬ್ ಹಾಗೂ ಶ್ವಾನ ದಳದೊಂದಿಗೆ ಕೋರ್ಟ್ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:04 am, Tue, 7 July 26
