13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿImage Credit source: tv9
ಬೆಂಗಳೂರು, ಜೂನ್ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದೆ. ಕಸ್ಟಮ್ಸ್ ಇಲಾಖೆಯ ತಪಾಸಣೆ ವೇಳೆ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ.
ಮುಖ್ಯಾಂಶಗಳು
- 13.14 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ.
- ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮ ತೈಲ ಸಾಗಣೆ ಜಾಲ.
- ಲಗೇಜ್ ಬ್ಯಾಗ್‌ಗಳಲ್ಲಿ ಅಡಗಿಸಿದ್ದ 6 ಮಂದಿ ಅರೆಸ್ಟ್.
ಮೊದಲ ಜಂಟಿ ಕಾರ್ಯಾಚರಣೆ ಜೂನ್ 11ರಂದು ಐವರ ಬಂಧನ
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 11, 2026ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ 5 ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಈ ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಬಚಾವಾಗಲು ತಮ್ಮ ಚೆಕ್-ಇನ್ ಬ್ಯಾಗೇಜ್‌ಗಳ (Checked-in baggage) ಒಳಗೆ ಅತ್ಯಂತ ಚಾಣಾಕ್ಷತನದಿಂದ ಗಾಂಜಾವನ್ನು ಅಡಗಿಸಿಟ್ಟಿದ್ದರು. ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು 24.8 ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 8.68 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಐದೂ ಜನರನ್ನು ತಕ್ಷಣವೇ ಬಂಧಿಸಲಾಗಿದೆ.
ಜೂನ್ 13ರಂದು ಮತ್ತೊಬ್ಬ ಅರೆಸ್ಟ್
ಜೂನ್ 13, 2026ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿತ್ತು. ಬೆಂಗಳೂರಿಗೆ ಬಂದಿಳಿದ ಓರ್ವ ಶಂಕಿತ ಪ್ರಯಾಣಿಕನನ್ನು ತಡೆದು ಆತನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಮತ್ತೊಂದು ಶಾಕ್ ಕಾದಿತ್ತು. ಈತನ ಬ್ಯಾಗ್‌ನಲ್ಲೂ ಕೂಡ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿಬಿದ್ದಿದೆ. ಇದರ ಒಟ್ಟು ಮೌಲ್ಯ 4.74 ಕೋಟಿ ರೂ. ಆಗಿದೆ.
NDPS ಕಾಯ್ದೆಯಡಿ ಮೊಕದ್ದಮೆ
🚨 Major NDPS Seizure at Bengaluru Airport | 13.06.2026
Bengaluru Customs intercepted a passenger arriving from Bangkok and seized 13.54 kg of hydroponic ganja, valued at ₹4.74 crore, concealed in checked-in and hand baggage.
The accused was arrested under the NDPS Act.#CBIC— Bengaluru Customs (@blrcustoms) June 14, 2026
ಈ ಎರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಕಸ್ಟಮ್ಸ್ ಇಲಾಖೆಯು ಒಟ್ಟು 13.14 ಕೋಟಿ ರೂ. ಬೆಲೆಬಾಳುವ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಂತಾಗಿದೆ. ಬಂಧಿತ 6 ಜನ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಾದ ಎನ್‌ಡಿಪಿಎಸ್ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಹಿಂದೆ ಬೆಂಗಳೂರಿನಲ್ಲಿ ಯಾರ್ಯಾರು ಇದ್ದಾರೆ ಮತ್ತು ಈ ಮಾದಕ ವಸ್ತುವನ್ನು ನಗರದ ಯಾವ ಭಾಗಗಳಿಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬುದನ್ನು ತಿಳಿಯಲು ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
