ಸಾಂದರ್ಭಿಕ ಚಿತ್ರImage Credit source: nl.techbriefly.com
ಬೆಂಗಳೂರು, ಜೂನ್ 01: ನಗರದ ಬಾಯ್ಸ್ ಪಿಜಿ (PG) ಒಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಚಾರ್ಜಿಂಗ್‌ಗೆ ಇಟ್ಟಿದ್ದ 8 ದುಬಾರಿ ಮೊಬೈಲ್ ಫೋನ್‌ಗಳನ್ನು (Mobile) ಕದ್ದು ಪರಾರಿಯಾಗಿರುವ ಘಟನೆ ಹೊಸಪಾಳ್ಯದಲ್ಲಿ ನಡೆದಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ.
ಮುಖ್ಯಾಂಶಗಳು
- ಬೆಂಗಳೂರಿನ ಹೊಸಪಾಳ್ಯದ ಸಾಯಿ ಆರಾಧ್ಯ ಬಾಯ್ಸ್ ಪಿಜಿಯಲ್ಲಿ ಭರ್ಜರಿ ಕಳ್ಳತನ.
- ರಾತ್ರಿ ಚಾರ್ಜಿಂಗ್‌ಗೆ ಇಟ್ಟಿದ್ದ ಒಟ್ಟು 8 ಮೊಬೈಲ್ ಫೋನ್‌ಗಳನ್ನು ಎಗರಿಸಿದ ಕಳ್ಳರು.
- ಕೊಠಡಿ ಬಾಗಿಲು ಲಾಕ್ ಮಾಡದ ಹಿನ್ನೆಲೆ; ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.
ಮುಂಜಾನೆ ಎದ್ದಾಗ ಬಯಲಾಯ್ತು ಕಳ್ಳತನದ ಜಾಲ
ಹೊಸಪಾಳ್ಯದ ಕೂಡ್ಲು ಮುಖ್ಯ ರಸ್ತೆಯಲ್ಲಿರುವ ಸಾಯಿ ಆರಾಧ್ಯ ಲಕ್ಸುರಿ ಪಿಜಿ ಫಾರ್ ಜೆಂಟ್ಸ್ನಲ್ಲಿ ಈ ಕಳ್ಳತನ ನಡೆದಿದೆ. ಪಿಜಿಯಲ್ಲಿ ವಾಸವಾಗಿರುವ 27 ವರ್ಷದ ಕ್ಯಾಬ್ ಚಾಲಕ ದರ್ಶನ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 28ರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಬಂದಿದ್ದ ದರ್ಶನ್, ತಮ್ಮ ಎರಡು ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟು ಮಲಗಿದ್ದರು. ಅವರ ಕೊಠಡಿಯ ಇತರ ಸ್ನೇಹಿತರು ಹಾಗೂ ಪಕ್ಕದ ರೂಮ್‌ನವರೂ ಸಹ ಫೋನ್‌ಗಳನ್ನು ಚಾರ್ಜ್‌ಗೆ ಇಟ್ಟಿದ್ದರು. ಮೇ 29ರ ಮುಂಜಾನೆ 6 ಗಂಟೆಗೆ ದರ್ಶನ್ ಎದ್ದು ನೋಡಿದಾಗ ಅವರ ಫೋನ್‌ಗಳು ನಾಪತ್ತೆಯಾಗಿತ್ತು. ತಕ್ಷಣವೇ ಪಿಜಿಯ ಉಳಿದ ರೂಮ್‌ಗಳಲ್ಲಿ ಪರಿಶೀಲಿಸಿದಾಗ ಒಟ್ಟು 8 ಫೋನ್‌ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ರೂಮ್ ಲಾಕ್ ಮಾಡದಿದ್ದದ್ದೇ ಕಳ್ಳರಿಗೆ ವರದಾನ!
ಈ ಪಿಜಿಯಲ್ಲಿ ಯಾವುದೇ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ ಎನ್ನಲಾಗಿದೆ. ಕಳ್ಳತನದ ಬಳಿಕ ಪೊಲೀಸರು ಪಿಜಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ಕಳ್ಳರು ಮಧ್ಯರಾತ್ರಿ ಕಟ್ಟಡದೊಳಗೆ ನುಗ್ಗಿ, ಫೋನ್‌ಗಳನ್ನು ಕದ್ದು ಯಾರಿಗೂ ತಿಳಿಯದಂತೆ ಎಸ್ಕೇಪ್ ಆಗಿರುವುದು ಸೆರೆಯಾಗಿದೆ. ಪಿಜಿ ನಿವಾಸಿಗಳು ರಾತ್ರಿ ವೇಳೆ ತಮ್ಮ ಕೊಠಡಿಯ ಬಾಗಿಲುಗಳನ್ನು ಲಾಕ್ ಮಾಡದೇ ಹಾಗೇ ಬಿಟ್ಟು ಮಲಗಿದ್ದರಿಂದ ಕಳ್ಳರಿಗೆ ಕಳವು ಮಾಡಲು ಸುಲಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಖದೀಮರಿಗಾಗಿ ಜಾಲ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
