ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 25 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, 17 ಪೆಡ್ಲರ್‌ಗಳ ಬಂಧನ – Kannada News | Mega Drug Bust in Bengaluru: CCB and Police Seize MDMA and Ganja Worth Rs 25 Crore, 17 Pedlars Including Arrested

ಬೆಂಗಳೂರು, ಜೂನ್ 29: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ನೆರೆಹೊರೆಯ ರಾಜ್ಯ ಹಾಗೂ ವಿದೇಶಗಳಿಂದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಡ್ರಗ್ಸ್ ಜಾಲವನ್ನು ಸಿಸಿಬಿ (CCB) ಹಾಗೂ ನಗರ ಪೊಲೀಸರು (Bengaluru Police) ಜಂಟಿ ಕಾರ್ಯಾಚರಣೆಯ ಮೂಲಕ ಧ್ವಂಸಗೊಳಿಸಿದ್ದಾರೆ. ನಗರದಾದ್ಯಂತ ನಡೆಸಲಾದ ಈ ಮೆಗಾ ಆಪರೇಷನ್‌ನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 17 ಮಂದಿ ಕುಖ್ಯಾತ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೆಜಿಗಟ್ಟಲೆ ಎಂಡಿಎಂಎ (MDMA) ಕ್ರಿಸ್ಟಲ್ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿಯ ಎಂಡಿಎಂಎ!

ಈ ಇಡೀ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಅತಿ ದೊಡ್ಡ ಬೇಟೆಯಾಡಿದೆ. ಲಗೇಜ್ ಬ್ಯಾಗ್‌ಗಳ ಒಳಗೆ ಎಂಡಿಎಂಎ ಕ್ರಿಸ್ಟಲ್ ಅನ್ನು ಯಾರಿಗೂ ಅನುಮಾನ ಬಾರದಂತೆ ಅಡಗಿಸಿಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ ಮೂವರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಇವರಿಂದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ 10 ಕೆಜಿ 270 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಅನ್ನು ಸೀಜ್ ಮಾಡಲಾಗಿದೆ. ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕೊನೇಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ನೈಜೀರಿಯಾದಲ್ಲಿದ್ದ ಇತರ ಪೆಡ್ಲರ್‌ಗಳ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಐಟಿ ಉದ್ಯೋಗಿಗಳನ್ನು ಸಂಪರ್ಕಿಸಿ ಮಾರಾಟ ಮಾಡುತ್ತಿದ್ದರು. ಇವರು ಮೆಡಿಕಲ್ ಮತ್ತು ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಬೆಂಗಳೂರಿನಲ್ಲೇ ನೆಲೆಸಿ ಈ ಕೃತ್ಯ ಎಸಗುತ್ತಿದ್ದರು ಎಂಬುದು ಬಯಲಾಗಿದೆ.

ವಾಹನ ಕಳ್ಳ ಈಗ ಗಾಂಜಾ ಕಿಂಗ್‌ಪಿನ್!

ಇನ್ನೊಂದೆಡೆ ಮಡಿವಾಳ ಪೊಲೀಸರು ನಡೆಸಿದ ದಾಳಿಯಲ್ಲಿ ಒಡಿಶಾದಿಂದ ಇಂಡಿಗೋ ಕಾರಿನಲ್ಲಿ 36 ಕೆಜಿ ಗಾಂಜಾ ಸಾಗಿಸುತ್ತಿದ್ದ ದಸ್ತಗಿರಿ ಅಲಿಯಾಸ್ ದಸ್ತು ಎಂಬಾತನನ್ನು ಬಂಧಿಸಲಾಗಿದೆ. ಈ ಹಿಂದೆ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಈತ ಈಗ ಗಾಂಜಾ ಪೆಡ್ಲರ್ ಆಗಿ ಬದಲಾಗಿದ್ದ. ಈತನಿಂದ 18 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಭರ್ಜರಿ ಬೇಟೆ

  • ಆರ್.ಎಂ.ಸಿ. ಯಾರ್ಡ್ ಪೊಲೀಸರ ಕಾರ್ಯಾಚರಣೆ: ₹72.30 ಲಕ್ಷ ಮೌಲ್ಯದ 1 ಕೆಜಿ 33 ಗ್ರಾಂ ಹೈಡ್ರೋ ಗಾಂಜಾ ಜಪ್ತಿ.
  • ಸುಬ್ರಹ್ಮಣ್ಯನಗರ ಪೊಲೀಸರ ಕಾರ್ಯಾಚರಣೆ: ₹69 ಲಕ್ಷ ಮೌಲ್ಯದ 45.8 ಕೆಜಿ ಗಾಂಜಾ, 237 ಗ್ರಾಂ ಹೈಡ್ರೋ ಗಾಂಜಾ ಹಾಗೂ 36 ಗ್ರಾಂ ಎಂಡಿಎಂಎ ವಶ.
  • ತಿಲಕನಗರ ಮತ್ತು ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಕ್ರಮವಾಗಿ 20.2 ಕೆಜಿ ಮತ್ತು 22 ಕೆಜಿ ಗಾಂಜಾ ಜಪ್ತಿ.
  • ಯಶವಂತಪುರ ಮತ್ತು ರಾಜಾಜಿನಗರ ಪೊಲೀಸರ ಕಾರ್ಯಾಚರಣೆ: 300 ಇ-ಸಿಗರೇಟ್‌ಗಳು, ಹುಕ್ಕಾ ಫ್ಲೇವರ್‌ಗಳು ಹಾಗೂ ₹15.84 ಲಕ್ಷ ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನಗಳ ಸೀಜ್.
  • ಇಂದಿರಾನಗರ ಪೊಲೀಸರ ಕಾರ್ಯಾಚರಣೆ: 3 ಕೆಜಿ 247 ಗ್ರಾಂ ಗಾಂಜಾ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶ.

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂಬುದನ್ನು ಈ ಜಂಟಿ ಆಪರೇಷನ್ ಸಾಬೀತುಪಡಿಸಿದೆ. ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಈ ಇಡೀ ನೆಟ್‌ವರ್ಕ್‌ನ ಹಿಂದಿರುವ ಮುಖ್ಯ ಕಿಂಗ್‌ಪಿನ್‌ಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *