ಬೆಂಗಳೂರು, ಜು.11: ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾರಿ ಗಾತ್ರದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ಮುರಿದುಬಿದ್ದ ಪರಿಣಾಮ, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶನೇಶ್ವರ ದೇವಸ್ಥಾನದ ಅರ್ಚಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವನಗುಡಿಯ ಬೃಂದಾವನ ನಗರದಲ್ಲಿ ಇಂದು (ಜು.11) ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಅರ್ಚಕರನ್ನು ಮಧು ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಅರ್ಚಕ ಮಧು ಅವರು ಮಧ್ಯಾಹ್ನದ ವೇಳೆ ಬೃಂದಾವನ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಬೃಹತ್ ಕಬ್ಬಿಣದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ದಿಢೀರನೆ ಕಟ್ ಆಗಿದೆ. ಈ ಭಾರಿ ತೂಕದ ಕಬ್ಬಿಣದ ಗೇಟ್ ನೇರವಾಗಿ ನಡೆದು ಹೋಗುತ್ತಿದ್ದ ಮಧು ಅವರ ಮೇಲೆಯೇ ಮುರಿದುಬಿದ್ದಿದೆ ಗೇಟ್‌ನ ಅಡಿಯಲ್ಲೇ ಕೆಲ ಹೊತ್ತು ಒದ್ದಾಡಿದ್ದಾರೆ. ಗೇಟ್ ಬಿದ್ದ ತಕ್ಷಣ ಜೋರಾದ ಶಬ್ದ ಕೇಳಿ ಧಾವಿಸಿ ಬಂದ ಸ್ಥಳೀಯರು ಭಾರಿ ಗಾತ್ರದ ಕಬ್ಬಿಣದ ಗೇಟನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಗೇಟ್ ತಗೆದು ಮಧು ಅವರನ್ನು ಹೊರಗೆಳೆದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಭಾರಿ ತೂಕದ ಗೇಟ್ ಬೆನ್ನಿನ ಮೇಲೆ ಬಿದ್ದ ರಭಸಕ್ಕೆ ಮಧು ಅವರ ಬೆನ್ನುಮೂಳೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳು ಅರ್ಚಕನನ್ನು ತಕ್ಷಣವೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
