ಬೆಂಗಳೂರು, ಏ.29: ರಾಜಧಾನಿಯಲ್ಲಿ ಇಂದು ಆರ್ಭಟಿಸಿದ ಮಳೆಯು ಸಾವು-ನೋವುಗಳ ಸರಣಿಯನ್ನೇ ಸೃಷ್ಟಿಸುತ್ತಿದೆ. ಈಗಾಗಲೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ಸಾವು ಸಂಭವಿಸಿದೆ. ನಗರದ ಯಾರಬ್ ನಗರದಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಸೈಯದ್ ಸೂಫಿಯಾನ್, ಸಂಜೆ ಮಳೆ ಸುರಿಯುತ್ತಿದ್ದ ವೇಳೆ ಯಾರಬ್ ನಗರದಲ್ಲಿ ತನ್ನ ಬೈಕ್ ಪಾರ್ಕ್ ಮಾಡಲು ಪ್ರಯತ್ನಿಸುತ್ತಿದ್ದನು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿ ಶಾಕ್ ತಗುಲಿದೆ ಎನ್ನಲಾಗಿದೆ. ಘಟನೆಯಲ್ಲಿ ಸೈಯದ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ವಿದ್ಯುತ್ ಹೇಗೆ ಪ್ರವಹಿಸಿತು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ, ಮಳೆಯಿಂದಾದ ಅವಾಂತರವೇ ಈ ಸಾವಿಗೆ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು
ಕಾಂಪೌಂಡ್ ಕುಸಿದು ಸಾವನ್ನಪ್ಪಿದವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ:
ಇಂದು ಆರ್ಭಟಿಸಿದ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಮಳೆಯು ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿದೆ. ನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ 7 ಜನರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯನ್ನು ಪರಿಶೀಲಿಸಿ ಸಂತ್ರಸ್ತರಿಗೆ ನೆರವು ಘೋಷಿಸಿದ್ದಾರೆ. ಮೃತಪಟ್ಟ ಏಳು ಜನರ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ 7 ಮಂದಿಗೆ ಸರ್ಕಾರಿ ವೆಚ್ಚದಲ್ಲೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವಂತೆ ಸಿಎಂ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅಜಾಗರೂಕತೆ ಕಂಡುಬಂದಲ್ಲಿ, ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸುವುದಾಗಿ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
