ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರ ಮತ್ತೆ ಏರಿಕೆ
ಬೆಂಗಳೂರು, ಜುಲೈ 23: ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. 2023ರಲ್ಲಿ ಎಕ್ಸ್‌ಪ್ರೆಸ್‌ವೇ ಆರಂಭವಾದ ಬಳಿಕ ಟೋಲ್ ದರಗಳು ಒಟ್ಟಾರೆ ಸುಮಾರು ಶೇ.37ರಷ್ಟು ಏರಿಕೆಯಾಗಿದೆ.
ಹೊಸ ಟೋಲ್ ದರದ ಮಾಹಿತಿ
- ಕಾರು, ಜೀಪು, ವ್ಯಾನ್ ಹಾಗೂ ಇತರೆ ಲಘು ವಾಹನಗಳು:
ಏಕಮುಖ ಪ್ರಯಾಣ: ₹185 (ಹಿಂದೆ ₹180, ಮಾರ್ಚ್‌ನಲ್ಲಿ ₹175, 2023ರಲ್ಲಿ ₹135)
ಒಂದೇ ದಿನದ ಹಿಂದಿರುಗುವ ಪ್ರಯಾಣ: ₹275
ಮಾಸಿಕ (50 ಪ್ರಯಾಣ) ಪಾಸ್: ₹6,100 (ಹಿಂದೆ ₹5,940) - ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಸ್ಥಳೀಯ ಮಾಸಿಕ ಪಾಸ್ ₹360 ಯಥಾಸ್ಥಿತಿ
- ಲಘು ವಾಣಿಜ್ಯ ವಾಹನಗಳು, ಮಿನಿಬಸ್, ಲಘು ಸರಕು ವಾಹನಗಳು: ₹295
- ಎರಡು ಅಕ್ಷಗಳ ಲಾರಿ ಮತ್ತು ಬಸ್‌ಗಳು: ₹620
- ಮೂರು ಅಕ್ಷಗಳ ವಾಣಿಜ್ಯ ವಾಹನಗಳು: ₹675
- ನಾಲ್ಕರಿಂದ ಆರು ಅಕ್ಷಗಳ ಭಾರೀ ವಾಹನಗಳು: ₹970
- ಏಳು ಅಥವಾ ಹೆಚ್ಚು ಅಕ್ಷಗಳ ವಾಹನಗಳು: ₹1,180
ಇದನ್ನೂ ಓದಿ: ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆಗೆ ಕೇಂದ್ರ ಗ್ರೀನ್ ಸಿಗ್ನಲ್; ತಿರುಪತಿ-ಚೆನ್ನೈ ಪ್ರಯಾಣಕ್ಕೆ ಇನ್ನಷ್ಟು ಅನುಕೂಲ
ದರ ಏರಿಕೆಗೆ ಕಾರಣವೇನು?
2023ರ ಜನವರಿಯಲ್ಲಿ ಹೊರಡಿಸಿದ್ದ ಟೋಲ್ ಗಜೆಟ್ ಅಧಿಸೂಚನೆ ಹಾಗೂ ಜುಲೈ 18ರಂದು ನೀಡಲಾದ ಹೊಸ ಅನುಮೋದನೆಯ ಆಧಾರದ ಮೇಲೆ 2026–27ನೇ ಹಣಕಾಸು ವರ್ಷದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ. ಬೆಂಗಳೂರು–ನಿಡಘಟ್ಟ ಮಾರ್ಗವು ಹೈಬ್ರಿಡ್ ಅನ್ಯುಟಿ ಮಾದರಿ (Hybrid Annuity Model) ಅಡಿಯಲ್ಲಿ ನಿರ್ಮಾಣವಾಗಿದ್ದು, ಈ ಮಾದರಿಯಲ್ಲಿ ಯೋಜನೆ ವೆಚ್ಚವನ್ನು ಟೋಲ್ ಸಂಗ್ರಹ ಮತ್ತು ಸರ್ಕಾರದ ಅನ್ಯುಟಿ ಪಾವತಿಗಳ ಮೂಲಕ ಮರುಪಡೆಯಲಾಗುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
