ಬೆಂಗಳೂರು, ಜೂನ್ 21: ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ (Zomato) ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಪ್ರಕಟಿಸಿದ್ದು, ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಈ ಹಾದಿ ಹಿಡಿದಿವೆ.
ಮುಖ್ಯಾಂಶಗಳು
- ಬೆಂಗಳೂರಿನ ಪ್ರಮುಖ ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳ ಬಳಕೆಗೆ ನಿಷೇಧ.
- ಜಂಕ್ ಫುಡ್ ತಡೆಯಲು ಮತ್ತು ಮಕ್ಕಳಲ್ಲಿ ಸಮಾನತೆ ಕಾಪಾಡಲು ನಿರ್ಧಾರ.
- ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಸಿಬ್ಬಂದಿಗೂ ಆನ್‌ಲೈನ್ ಆರ್ಡರ್ ಬಂದ್.
ನಿಷೇಧಕ್ಕೆ ಕಾರಣಗಳೇನು?
ಶಾಲಾ ಆಡಳಿತ ಮಂಡಳಿಗಳುಯ ಹೇಳುವಂತೆ ಹೊರಗಿನಿಂದ ಆರ್ಡರ್ ಮಾಡುವ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಯೊಂದರ ಪ್ರಾಂಶುಪಾಲರು ಹೇಳುವಂತೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಮತ್ತು ತಾರತಮ್ಯ ಮೂಡಿಸುತ್ತದೆ. ಇದು ಪೋಷಕರ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ಅಪರಿಚಿತ ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಬರುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ. ಪ್ರತಿದಿನ 4-5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ಅಡ್ಡಿಪಡಿಸುತ್ತದೆ.
ಮನೆಯ ಊಟಕ್ಕೆ ಆದ್ಯತೆ
ಪೋಷಕರು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
