ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಚೈನ್ ಸ್ನಾಚಿಂಗ್
ಬೆಂಗಳೂರು, ಆಗಸ್ಟ್ 14: ನಗರದಲ್ಲಿ (Bengaluru) ಒಂಟಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಚೈನ್ ಸ್ನಾಚರ್‌ಗಳ ಹಾವಳಿ ಮಿತಿಮೀರಿದೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗುವ ಹಾಗೂ ಕೆಲಸಕ್ಕೆ ಹೊರಡುವ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಮೃಗಗಳಂತೆ ಮುಗಿಬೀಳುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಇತ್ತೀಚೆಗೆ ನಗರದ ನೆಲಗದರನಹಳ್ಳಿಯಲ್ಲಿ ನಡೆದಿರುವ ಚೈನ್ ಸ್ನಾಚಿಂಗ್ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಎದೆ ಝಲ್ ಎನ್ನಿಸುವಂತಿವೆ.
ಒಂಟಿ ಮಹಿಳೆ ಮೇಲೆ ಅಟ್ಯಾಕ್
ನೆಲಗದರನಹಳ್ಳಿಯಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿರುವ ರವಿಕುಮಾರ್ ಹಾಗೂ ಅವರ ಪತ್ನಿ ವಿಜಯಮ್ಮ ಎಂದಿನಂತೆ ಮುಂಜಾನೆ 4 ಗಂಟೆಗೆ ವ್ಯಾಪಾರಕ್ಕೆ ತೆರಳಿದ್ದರು. ಬೆಳಿಗ್ಗೆ ಸುಮಾರು 5:15ರ ವೇಳೆಗೆ ವಿಜಯಮ್ಮ ಅವರು ಒಬ್ಬರೇ ಮನೆಗೆ ವಾಪಸ್ ಆಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಕಿರಾತಕರು ಆಕೆಯನ್ನು ಹಿಂಬಾಲಿಸಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿ, ಮುಖವಾಡ ಧರಿಸಿದ್ದ ಆರೋಪಿಯೊಬ್ಬ ಏಕಾಏಕಿ ವಿಜಯಮ್ಮ ಅವರ ಮೇಲೆ ಮೃಗದಂತೆ ಎರಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಕ್ಷಣಾರ್ಧದಲ್ಲಿ ಬೈಕ್ ಹತ್ತಿ ಎಸ್ಕೇಪ್
ಮತ್ತೋರ್ವ ಆರೋಪಿ ಬೈಕ್ ಮೇಲಿಂದಲೇ ಆಕೆಗೆ ಕಾಲಿನಿಂದ ಒದ್ದು ಮೃಗೀಯವಾಗಿ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ವಿಜಯಮ್ಮ ಅವರು ಪ್ರಾಣಭಯದಿಂದ ಜೋರಾಗಿ ಚೀರಾಡಿದ್ದಾರೆ. ಈ ಆಕ್ರಂದನ ಕೇಳಿ ಸ್ಥಳೀಯ ರಸ್ತೆಯಲ್ಲಿದ್ದ ಬೀದಿ ನಾಯಿಯೊಂದು ಮಹಿಳೆಯ ಸಹಾಯಕ್ಕೆ ಓಡಿಬಂದು, ಆರೋಪಿಗೆ ಕಚ್ಚಲು ಮುಂದಾಗಿದೆ. ಆದರೂ ಬಿಡದ ದುಷ್ಕರ್ಮಿಗಳು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾರೆ.
ಆರೋಪಿಗಳು ಪೊಲೀಸರ ಕಣ್ಣು ತಪ್ಪಿಸಲು ಬೈಕ್‌ನ ನಂಬರ್ ಪ್ಲೇಟ್ ಅನ್ನು ಮೊದಲೇ ತೆಗೆದುಹಾಕಿ ಈ ಕೃತ್ಯ ಎಸಗಿದ್ದಾರೆ. ನಡುರಸ್ತೆಯಲ್ಲೇ ಹೆಣ್ಣುಮಗಳ ಮೇಲೆ ನಡೆದಿರುವ ಈ ದೌರ್ಜನ್ಯ ಸದ್ಯ ಇಡೀ ನಗರದ ಮಹಿಳೆಯರಲ್ಲಿ ಭಯ ಹುಟ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಸದ್ಯ ಚಾಣಾಕ್ಷ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
