ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನ ಸಾವಿಗೆ ಸ್ಫೋಟಕ ಕಾರಣ ಬಹಿರಂಗ: ಗುತ್ತಿಗೆದಾರರ ವಿರುದ್ಧ FIR – Kannada News | Bowring Hospital Tragedy: Cause of Death of 7 Revealed, FIR Filed Against Contractor

ಬೌರಿಂಗ್ ಆಸ್ಪತ್ರೆ ದುರಂತImage Credit source: tv9 kannada

ಬೆಂಗಳೂರು, ಮೇ 24: ನಗರದ ಬೌರಿಂಗ್ ಆಸ್ಪತ್ರೆಯ (Bowring Hospital Tragedy) ಕಾಂಪೌಂಡ್ ಕುಸಿದು ಏಳು ಜನ ಅಮಾಯಕರು ಬಲಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ (FIR) ದಾಖಲಾಗಿದೆ. ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಎಎಸ್​​ಆರ್ ಟ್ರೇಡರ್ಸ್ ಕಂಪನಿ ವಿರುದ್ಧ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರ ದೂರು ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ಪ್ರಕರಣ
  • ಕಮರ್ಷಿಯಲ್ ಸ್ಟ್ರೀಟ್ ಠಾಣೆ ಮೆಟ್ಟಿಲೇರಿದ ಎಕ್ಸಿಕ್ಯೂಟಿವ್ ಇಂಜಿನಿಯರ್​​
  • ಚೆನ್ನೈ ಮೂಲದ ಕಂಪನಿ ವಿರುದ್ಧ ಎಫ್​ಐಆರ್​ ದಾಖಲು

ಚೆನ್ನೈ ಮೂಲದ ಎಎಸ್​​ಆರ್ ಟ್ರೇಡರ್ಸ್ ಕಂಪನಿ ಬೌರಿಂಗ್ ಮತ್ತು ಲೇಡಿ ಕರ್ಝನ್ ಮೆಡಿಕಲ್ ಕಾಲೇಜ್​​ನಿರ್ಮಾಣದ ಗುತ್ತಿಗೆ ಪಡೆದಿತ್ತು. ನೆಲಸಮ ಮಾಡಿದ್ದ ಕಟ್ಟಡದ ಅವಶೇಷ ಹಾಗೂ ಹೆಚ್ಚುವರಿ ತ್ಯಾಜ್ಯಗಳನ್ನು ನಿಯಮಾನುಸಾರ ಸ್ಥಳದಿಂದ ತೆರವುಗೊಳಿಸಿರಲಿಲ್ಲ. ಬದಲಿಗೆ, ಭಾರಿ ಪ್ರಮಾಣದ ತ್ಯಾಜ್ಯವನ್ನು ಕಾಂಪೌಂಡ್​ ಪಕ್ಕದಲ್ಲೇ ರಾಶಿ ಹಾಕಲಾಗಿತ್ತು. ಹೀಗಾಗಿ ಭಾರ ತಡೆಯಲಾರದೆ ಗೋಡೆ ಕುಸಿದು ಬಿದ್ದಿದ್ದರಿಂದ ಏಳು ಜನ ಅಮಾಯಕರು ಜೀವ ಕಳೆದುಕೊಂಡಿದ್ದರು.

ನೋಟಿಸ್​​ಗೆ ಪ್ರತಿಕ್ರಿಯಿಸದ ಗುತ್ತಿಗೆದಾರ ಕಂಪನಿ

ಇನ್ನು ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘಿಸಿದ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರದ ವತಿಯಿಂದ ಎಎಸ್‌ಆರ್ ಟ್ರೇಡರ್ಸ್ ಕಂಪನಿಯ ಇಮೇಲ್ ಐಡಿಗೆ ನೋಟಿಸ್ ಕಳುಹಿಸಲಾಗಿತ್ತು. ಮೇ 18ರ ಒಳಗಾಗಿ ಲಿಖಿತ ಸ್ಪಷ್ಟೀಕರಣ ನೀಡಬೇಕೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಗುತ್ತಿಗೆದಾರ ಕಂಪನಿಯು ಇಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Bengaluru Rain Tragedy: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು

ಸರ್ಕಾರದ ನೋಟಿಸ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಇಂಜಿನಿಯರ್ ಚಂದ್ರು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಘಟನೆ ಹಿನ್ನೆಲೆ

ಏಪ್ರಿಲ್​​ 29ರಂದು ವರುಣಾರ್ಭಟಕ್ಕೆ ಬೆಂಗಳೂರಿನಲ್ಲಿ ಘೋರ ದುರಂತವೇ ನಡೆದು ಹೋಗಿತ್ತು. ಆಲಿಕಲ್ಲು, ಬಿರುಗಾಳಿಯೊಂದಿಗೆ ಅಬ್ಬರಿಸಿದ್ದ ಮಳೆ ಬೃಹತ್‌ ಕಾಂಪೌಂಡನ್ನೇ ಉರುಳಿಸಿತ್ತು. 7 ಜನರನ್ನ ಬಲಿ ಪಡೆದಿತ್ತು. ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದಿತ್ತು. ಕಾಂಪೌಂಡ್‌ ಬಳಿಯೇ ಬೀದಿಬದಿ ವ್ಯಾಪಾರ ಮಾಡುತ್ತಿದ್ದ ಐವರು ಹಾಗೂ ಇಬ್ಬರು ಪಾದಚಾರಿಗಳು ಸೇರಿದಂತೆ 7 ಮಂದಿ ಉಸಿರು ನಿಲ್ಲಿಸಿದ್ದರೆ, ಇತರೆ 7 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ವರದಿ: ವಿಕಾಸ್​ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *