ಬೆಂಗಳೂರು, ಜೂನ್ 17: ಸುಮಾರು ಒಂದೂವರೆ ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಬಳಿ ಸಂಭವಿಸಿದ ಬೃಹತ್ ಗೋಡೆ ಕುಸಿತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಭೀಕರ ದುರಂತ ಸಂಭವಿಸಿದರೂ, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಘಟನಾ ಸ್ಥಳದಿಂದ ಕೇವಲ 100-150 ಮೀಟರ್ ಅಂತರದಲ್ಲಿ, ಬೌರಿಂಗ್ ಆಸ್ಪತ್ರೆಯ ಮತ್ತೊಂದು ಗೋಡೆಯು ಬೃಹತ್ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ.
ಈ ಅಪಾಯಕಾರಿ ಪ್ರದೇಶದಲ್ಲಿ ಜನಸಾಮಾನ್ಯರು, ವಿಶೇಷವಾಗಿ ಪಾದಚಾರಿಗಳು ನಿತ್ಯ ಓಡಾಡುತ್ತಿದ್ದಾರೆ. ಆದರೆ, ಯಾವುದೇ ಬ್ಯಾರಿಕೇಡ್‌ಗಳನ್ನಾಗಲಿ ಅಥವಾ ಮುನ್ನೆಚ್ಚರಿಕೆಯನ್ನಾಗಲಿ ಅಳವಡಿಸಿಲ್ಲ. ಮಳೆಗಾಲ ಮತ್ತೆ ಸಮೀಪಿಸುತ್ತಿದ್ದು, ಈ ಗೋಡೆ ಕುಸಿದು ಮತ್ತೊಂದು ದುರಂತ ಸಂಭವಿಸುವ ಭೀತಿಯಿದೆ. ಜಿಬಿಎ ಅಧಿಕಾರಿಗಳಿಗೆ ಮತ್ತು ಬೆಂಗಳೂರು ಕೇಂದ್ರ ನಗರಪಾಲಿಕೆ ಅಧಿಕಾರಿಗಳಿಗೆ ಇಂತಹ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ಆಘಾತಕಾರಿಯಾಗಿದೆ. ಪಾದಚಾರಿಗಳ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ಕನಿಷ್ಠ ದುರಂತ ಸಂಭವಿಸಿದ ಪ್ರದೇಶದ ಸುತ್ತಮುತ್ತಲ ಗೋಡೆಗಳನ್ನಾದರೂ ಸುರಕ್ಷಿತಗೊಳಿಸುವ ಮೂಲಕ ಸಾರ್ವಜನಿಕರ ಜೀವಕ್ಕೆ ಭದ್ರತೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ