ಬ್ಯಾಡಗಿ ಮೆಣಸಿನಕಾಯಿImage Credit source: tv9 kannada
ಹಾವೇರಿ, ಮೇ 06: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ (Byadagi Chilli) ಮಾರುಕಟ್ಟೆಯಲ್ಲಿ ರೈತನೊಬ್ಬನಿಗೆ (Farmer) ದಲ್ಲಾಳಿಯೊಬ್ಬ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರೈತ ಮಹಾದೇವಪ್ಪ ಎಂಬುವವರ ಮೋಸಕ್ಕೊಳಗಾದವರು. ಬೆಳೆದ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ, ದಲ್ಲಾಳಿ ನಾಗಪ್ಪ ಹಡಗಲಿ ಎಂಬಾತನ ಸಹಾಯದಿಂದ 2023ರಲ್ಲಿ ತಮ್ಮ 363 ಚೀಲ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಮಾರಾಟ ಮಾಡಲು ಬಂದ ರೈತನಿಗೆ, ಅತ್ತ ಮೆಣಸಿನಕಾಯಿಯೂ ಇಲ್ಲ, ಹಣವೂ ಇಲ್ಲದಂತಾಗಿದೆ. ದಲ್ಲಾಳಿ ನಮ್ಮ ಗಮನಕ್ಕೆ ಬಾರದೆ ಮೆಣಸಿನಕಾಯಿಯನ್ನು ಮಾರಾಟ ಮಾಡಿದ್ದಾನೆ ಎಂದು ರೈತ ಕುಟುಂಬ ಆರೋಪಿಸಿದೆ.
ಮುಖ್ಯಾಂಶಗಳು
- 2023ರಲ್ಲಿ ದಾಸ್ತಾನು ಮಾಡಿದ್ದ 363 ಚೀಲ ಮೆಣಸಿನಕಾಯಿ ನಾಪತ್ತೆ
- ಅಂದಾಜು 50 ಲಕ್ಷ ರೂ ಮೌಲ್ಯದ ಮೆಣಸಿನಕಾಯಿ ಮಾರಾಟ ಮಾಡಿ ವಂಚನೆ ಆರೋಪ
- ಸಂತ್ರಸ್ತ ರೈತನಿಂದ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನಡೆದಿದ್ದೇನು?
ರೈತ ಮಹಾದೇವಪ್ಪ ಅವರು 2023ರಲ್ಲಿ ದರ ಕಡಿಮೆ ಇದ್ದಿದ್ದರಿಂದ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟು ಹೋಗಿದ್ದರು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದ್ದರಿಂದ, ಅದನ್ನು ಮಾರಾಟ ಮಾಡಲು ಬಂದಾಗ ಮೆಣಸಿನಕಾಯಿ ಚೀಲಗಳು ನಾಪತ್ತೆಯಾಗಿರುವುದು ಕಂಡು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಬ್ಯಾಡಗಿ ಮೆಣಸಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ
ತಿಪ್ಪೇಸ್ವಾಮಿ ಮೆಣಸಿನಕಾಯಿ ಏಜೆನ್ಸಿಯವರು ರೈತನಿಗೆ ಆರಂಭದಲ್ಲಿ ಕೂಲಿ ಕಾರ್ಮಿಕರಿಗೆ ನೀಡುವ ನೆಪದಲ್ಲಿ ಸ್ವಲ್ಪ ಹಣ ನೀಡಿದ್ದರೂ, ನಂತರದ ದಿನಗಳಲ್ಲಿ ರೈತನ ಹೆಸರಿನಲ್ಲಿರುವ ಸುಮಾರು 50 ಲಕ್ಷ ರೂ ಮೌಲ್ಯದ ಮೆಣಸಿನಕಾಯಿಯನ್ನು ರೈತನ ಅನುಮತಿಯಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಮೂಲ ದಾಖಲೆಗಳನ್ನ ತೆಗೆದುಕೊಂಡು ನಮಗೆ ಮೋಸ ಮಾಡಿದ್ದಾರೆ. ನ್ಯಾಯ ಬೇಕು ಅಂತಾ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ರೈತ ಮಹಾದೇವಪ್ಪ ಪ್ರಕರಣ ದಾಖಲಿಸಿದ್ದಾರೆ.
ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ, ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ರೈತ ನೀಡಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣವು ತನಿಖಾ ಹಂತದಲ್ಲಿದ್ದು, ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ರೈತನಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 9:33 pm, Wed, 6 May 26
