ಬ್ಯಾಡ್ ನ್ಯೂಸ್: ಪಾಕಿಸ್ತಾನ ಸಂಧಾನ ವಿಫಲ, ಇರಾನ್ ಜೊತೆ ಒಪ್ಪಂದವಿಲ್ಲದೆ ಅಮೆರಿಕ ನಿಯೋಗ ವಾಪಸ್

ಬ್ಯಾಡ್ ನ್ಯೂಸ್: ಪಾಕಿಸ್ತಾನ ಸಂಧಾನ ವಿಫಲ, ಇರಾನ್ ಜೊತೆ ಒಪ್ಪಂದವಿಲ್ಲದೆ ಅಮೆರಿಕ ನಿಯೋಗ ವಾಪಸ್

ವಾಷಿಂಗ್ಟನ್, ಏಪ್ರಿಲ್ 12: ಅಮೆರಿಕ ಮತ್ತು ಇರಾನ್(Iran) ನಡುವಿನ ದೀರ್ಘಕಾಲದ ವೈಮನಸ್ಸು ಶಮನಗೊಳಿಸಲು ಪಾಕಿಸ್ತಾನದ ಮಣ್ಣಿನಲ್ಲಿ ನಡೆದ ಐತಿಹಾಸಿಕ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸತತ 21 ಗಂಟೆಗಳ ಕಾಲ ಎರಡೂ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗಿ ಚರ್ಚಿಸಿದರೂ, ಅಂತಿಮವಾಗಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಘೋಷಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮಾತುಕತೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿ ವ್ಯಾನ್ಸ್, ತಮ್ಮ ನಿರಾಶೆಯನ್ನು ಮರೆಮಾಚಲಿಲ್ಲ.

ನಾವು ಸತತ 21 ಗಂಟೆಗಳ ಕಾಲ ಮಾತುಕತೆಯಲ್ಲಿ ತೊಡಗಿದ್ದೆವು. ಆದರೆ ದುರದೃಷ್ಟವಶಾತ್ ನಾವು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದು ಕೆಟ್ಟ ಸುದ್ದಿ. ನಾವು ಇರಾನ್‌ಗೆ ಅತ್ಯುತ್ತಮ ಆಫರ್‌ಗಳನ್ನು ನೀಡಿದ್ದೆವು, ಆದರೂ ಅವರು ಒಪ್ಪಂದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮ್ಮ ನಿಯೋಗ ಈಗ ಪಾಕಿಸ್ತಾನದಿಂದ ಅಮೆರಿಕಕ್ಕೆ ಹಿಂದಿರುಗುತ್ತಿದೆ ಎಂದು ಅವರು ತಿಳಿಸಿದರು. ಮಾತುಕತೆಯ ಸಮಯದಲ್ಲಿ ವಾಷಿಂಗ್ಟನ್ ತನ್ನ ನಿರ್ಣಾಯಕ ಶರತ್ತುಗಳನ್ನು ಸ್ಪಷ್ಟವಾಗಿ ವಿವರಿಸಿದೆ ಎಂದು ವ್ಯಾನ್ಸ್ ಹೇಳಿದರು.

ಮತ್ತಷ್ಟು ಓದಿ: ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಅಮೆರಿಕದ ಪಟ್ಟು
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಮತ್ತು ಅಂತಹ ಶಸ್ತ್ರಾಸ್ತ್ರಗಳನ್ನು ಸಾಧಿಸಲು ಅನುವು ಮಾಡಿಕೊಡುವ ಸಾಧನಗಳನ್ನು ಹುಡುಕುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನೀಡಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆಯಾಗಿತ್ತು.

ಟ್ರಂಪ್ ಗುರಿ
ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಗುರಿಯಾಗಿದೆ. ಆದರೆ ಇರಾನ್ ಈ ಷರತ್ತುಗಳಿಗೆ ಪೂರ್ಣವಾಗಿ ಒಪ್ಪದ ಕಾರಣ ಮಾತುಕತೆ ಹಳಿ ತಪ್ಪಿದೆ.

ಪಾಕಿಸ್ತಾನದ ಪಾತ್ರಕ್ಕೆ ಮೆಚ್ಚುಗೆ
ಮಾತುಕತೆಗಳು ವಿಫಲವಾದರೂ ಸಹ, ಈ ಕಠಿಣ ಸಂಧಾನ ಪ್ರಕ್ರಿಯೆಯನ್ನು ಸುಗಮಗೊಳಿಸಿದ ಪಾಕಿಸ್ತಾನದ ಪ್ರಯತ್ನವನ್ನು ಜೆಡಿ ವ್ಯಾನ್ಸ್ ಶ್ಲಾಘಿಸಿದರು. ಮಾತುಕತೆಯಲ್ಲಿ ಏನೇ ನ್ಯೂನತೆಗಳಿದ್ದರೂ, ಅದಕ್ಕೆ ಪಾಕಿಸ್ತಾನ ಕಾರಣವಲ್ಲ. ಅವರು ಅದ್ಭುತ ಕೆಲಸ ಮಾಡಿದ್ದಾರೆ, ಎಂದು ಅವರು ಹೇಳಿದರು.

ಮುಂದೇನು?
ಈ ಅಪರೂಪದ ನೇರ ಮಾತುಕತೆಗಳು ವಿಫಲವಾಗಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚುವ ಮುನ್ಸೂಚನೆ ನೀಡಿದೆ. ಈ ವಿಫಲತೆಯು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ವಿಶ್ವಾಸದ ಕೊರತೆಯನ್ನು ಎತ್ತಿ ತೋರಿಸಿದೆ, ಲೆಬನಾನ್‌ನಲ್ಲಿನ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ, ಈ ಮಾತುಕತೆ ವಿಫಲವಾಗಿರುವುದು ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಪೆಟ್ಟು ನೀಡಿದೆ.

ಅಮೆರಿಕವು ಇರಾನ್‌ಗೆ ನೀಡಿದ್ದ ಅಂತಿಮ ಆಫರ್‌ಗಳನ್ನು ಇರಾನ್ ತಿರಸ್ಕರಿಸುವ ಮೂಲಕ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಅಮೆರಿಕ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರುವ ಅಥವಾ ಮಿಲಿಟರಿ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಗಳು ದಟ್ಟವಾಗಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *