ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಿರುವುದುImage Credit source: tv9
ಚಾಮರಾಜನಗರ, ಮಾರ್ಚ್ 6: ದೇವರಿಗೆ ಪೂಜೆ ಸಲ್ಲಿಸುವ ವೇಳೆ ತೆಂಗಿನಕಾಯಿ ಒಡೆಯುವುದು ಸಾಮಾನ್ಯ ಸಂಪ್ರದಾಯ. ಆದರೆ ಚಾಮರಾಜನಗರ (Chamarajanagar) ಜಿಲ್ಲೆಯ ಒಂದು ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಭಕ್ತರ ತಲೆಯ ಮೇಲೆಯೇ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ. ಈ ಅಪರೂಪದ ಆಚರಣೆ ಗಡಿ ನಾಡು ಚಾಮರಾಜನಗರ ಜಿಲ್ಲೆಯ ಕಮರವಾಡಿ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಮೂಗುಮಾರಮ್ಮ ಜಾತ್ರೆಯ ವಿಶೇಷವಾಗಿದೆ.
ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಮೂಗುಮಾರಮ್ಮ ದೇವಿಯ ಜಾತ್ರೆ ಮೂರು ದಿನಗಳ ಕಾಲ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದು ದೇವಿಗೆ ಪೂಜೆ ಸಲ್ಲಿಸುವುದು. ಜಾತ್ರೆಯ ಮೊದಲ ದಿನ ದೇವಿಯ ಮೆರವಣಿಗೆ ನಡೆಯುವ ವೇಳೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವ ವಿಡಿಯೋ
ಜಾತ್ರೆಯ ಎರಡನೇ ದಿನ ದೇವಿಗೆ ವಿವಿಧ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಮೂರನೇ ದಿನ ಗ್ರಾಮಸ್ಥರು ಮನೆ ಮನೆಗೆ ತೆರಳಿ ಅಕ್ಕಿ, ಬೆಲ್ಲ ಸೇರಿದಂತೆ ಪಡಿತರ ಸಂಗ್ರಹಿಸುವ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪದ್ಧತಿ ಕೂಡ ನಡೆಯುತ್ತದೆ. ಗ್ರಾಮದ ಪ್ರತಿಯೊಂದು ಮನೆಯ ಮುಂದೆಯೇ ಈ ಪೂಜೆ ನೆರವೇರಿಸಲಾಗುತ್ತದೆ.
ಗಾಯವಾಗಲ್ಲ, ರಕ್ತ ಬರಲ್ಲ!
ಆಶ್ಚರ್ಯಕರ ಸಂಗತಿ ಏನೆಂದರೆ, ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದರೂ ಅವರಿಗೆ ಯಾವುದೇ ರೀತಿಯ ಗಾಯವಾಗುವುದಿಲ್ಲ, ರಕ್ತವೂ ಹರಿಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದು ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎಂದು ಭಕ್ತರು ನಂಬಿಕೆ ವ್ಯಕ್ತಪಡಿಸುತ್ತಾರೆ. ತಲೆಯ ಮೇಲೆ ಹೊಡೆಯುವ ತೆಂಗಿನಕಾಯಿ ಒಂದೇ ಹೊಡೆತದಲ್ಲಿ ಎರಡು ಭಾಗಗಳಾಗಿ ಒಡೆಯುವುದು ಈ ಆಚರಣೆಯ ವಿಶೇಷವಾಗಿದೆ.
ಇದನ್ನೂ ಓದಿ: ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ
ತಲೆತಲಾಂತರಗಳಿಂದ ನಡೆದುಬರುತ್ತಿರುವ ಈ ಅಪರೂಪದ ಸಂಪ್ರದಾಯವನ್ನು ಇಂದಿಗೂ ಗ್ರಾಮಸ್ಥರು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ವಿಶಿಷ್ಟ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ.
