
ನವದೆಹಲಿ, ಏಪ್ರಿಲ್ 3: ಭಾರತಕ್ಕೆ ಇರಾನಿನ ಕಚ್ಚಾ ತೈಲವನ್ನು ಸಾಗಿಸಬೇಕಾಗಿದ್ದ ತೈಲ ಟ್ಯಾಂಕರ್ (Oil Tanker) ಸಮುದ್ರದ ಮಧ್ಯೆ ಮಾರ್ಗವನ್ನು ಬದಲಾಯಿಸಿ ಚೀನಾದ ಕಡೆಗೆ ಸಾಗುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಭಾರತ ಇರಾನ್ನಿಂದ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿತ್ತು. ಆದರೆ, ಆ ಟ್ಯಾಂಕರ್ ಗುಜರಾತ್ ಬಂದರಿಗೆ ಆಗಮಿಸುವ ಬದಲು ಚೀನಾದ ಕಡೆ ತೆರಳುತ್ತಿದೆ. ಕಳೆದ 3 ದಿನಗಳಿಂದ ಗುಜರಾತ್‌ನ ವಡಿನಾರ್‌ಗೆ ತೆರಳುತ್ತಿದ್ದ ಇರಾನಿನ ಕಚ್ಚಾ ತೈಲದ ಹಡಗು ಪಿಂಗ್ ಶುನ್ ಭಾರತದ ಬದಲಾಗಿ ಚೀನಾಕ್ಕೆ ಸಿಗ್ನಲ್ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.
2002ರಲ್ಲಿ ನಿರ್ಮಿಸಲಾದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಈಗ ಗುಜರಾತ್ ಬದಲಾಗಿ ಚೀನಾದ ಡಾಂಗ್ಯಿಂಗ್‌ನತ್ತ ಸಾಗುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ಕೆಪ್ಲರ್ ತಿಳಿಸಿದೆ. ಈ ವಾರದ ಆರಂಭದಲ್ಲಿ ಈ ಹಡಗು ಭಾರತದ ಪಶ್ಚಿಮ ಕರಾವಳಿಯ ವಾಡಿನಾರ್‌ಗೆ ಆಗಮನವನ್ನು ಸೂಚಿಸಿತ್ತು. ಆದರೆ ಅದು ಚೀನಾದ ದಿಕ್ಕಿಗೆ ತಿರುಗಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಈ ಹಡಗಿನ ಗಮ್ಯಸ್ಥಾನ ಇನ್ನೂ ಬದಲಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: 7 ವರ್ಷಗಳ ಬಳಿಕ ಇರಾನ್ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!
ಈಸ್ವತಿನಿ ಧ್ವಜ ಹೊತ್ತ ಪಿಂಗ್ ಶುನ್ ಹಡಗು ತನ್ನ ಟ್ರಾನ್ಸ್‌ಪಾಂಡರ್‌ಗಳು ಮತ್ತು AIS (ಸ್ವಯಂಚಾಲಿತ ಗುರುತಿನ ವ್ಯವಸ್ಥೆ) ಮೂಲಕ ಏಪ್ರಿಲ್ 4ರಂದು ಗುಜರಾತ್‌ನ ಟರ್ಮಿನಲ್‌ಗೆ ಹೋಗುವ ಮಾರ್ಗದಲ್ಲಿದೆ ಎಂದು ಸೂಚಿಸಿತ್ತು. ಆದರೆ, ಅದು ಈಗ ಚೀನಾಗೆ ತೆರಳುತ್ತಿದೆ. ಬೆಲೆ, ವಿಮೆ, ಕಾರ್ಯಾಚರಣಾ ಸಿಬ್ಬಂದಿ ಅಥವಾ ದಾಖಲಾತಿಯಲ್ಲಿನ ಸಮಸ್ಯೆಗಳು ಸೇರಿದಂತೆ ಹಲವು ಅಂಶಗಳು ಈ ರೀತಿಯ ಹಡಗಿನ ಮಾರ್ಗದಲ್ಲಿನ ಬದಲಾವಣೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಹಡಗು ತನ್ನ ಗಮ್ಯಸ್ಥಾನವನ್ನು ಬದಲಾಯಿಸಿದ ನಿಖರವಾದ ಕಾರಣ ಖಚಿತವಾಗಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟನೆಯೂ ಬಂದಿಲ್ಲ.
ಇದಕ್ಕೂ ಮೊದಲು, ಮಾರ್ಚ್ 21ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಗನಕ್ಕೇರುತ್ತಿರುವ ಕಚ್ಚಾ ತೈಲದ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಟ್ಯಾಂಕರ್‌ಗಳಿಗೆ ಈಗಾಗಲೇ ಲೋಡ್ ಮಾಡಲಾದ ಇರಾನಿನ ತೈಲವನ್ನು ಮಾರಾಟ ಮಾಡಲು ಅನುಮತಿ ನೀಡಿದ್ದರು. ಇರಾನ್ನಿಂದ ಹೊರಟಿದ್ದ ಈ ಹಡಗನ್ನು ಚೀನಾದ ಕಂಪನಿಯಾದ ನೈಸಿಟಿ ಶಿಪ್‌ಮ್ಯಾನೇಜ್‌ಮೆಂಟ್ ಕಂ. ಲಿಮಿಟೆಡ್ ನಿರ್ವಹಿಸುತ್ತದೆ. ಇದು ಇರಾನ್‌ನ ಖಾರ್ಗ್ ದ್ವೀಪದಿಂದ ಕಚ್ಚಾ ತೈಲವನ್ನು ಲೋಡ್ ಮಾಡಿತ್ತು.
ಇದನ್ನೂ ಓದಿ: ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದೆ ಎಲ್ಪಿಜಿ ಹೊತ್ತ 2 ಹಡಗುಗಳು
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ತನ್ನ ಕಚ್ಚಾ ತೈಲದ ಸುಮಾರು ಶೇ. 90ರಷ್ಟು ದ್ರವೀಕೃತ ನೈಸರ್ಗಿಕ ಅನಿಲದ (LNG) ಅರ್ಧದಷ್ಟು ಮತ್ತು LPGಯ ಸರಿಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಸರಬರಾಜುಗಳಲ್ಲಿ ಹೆಚ್ಚಿನವು ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತವೆ. ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅನುಮತಿ ನೀಡಿದ್ದರೂ ಬಿಕ್ಕಟ್ಟು ಇನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ