ಖ್ಯಾತ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಹನಿ ಟ್ರೆಹನ್ ನಿರ್ದೇಶನದ ಬಹುನಿರೀಕ್ಷಿತ ‘ಸತ್ಲುಜ್’ (Satluj) ಚಿತ್ರವು ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ‘ಝೀ5’ (ZEE5) ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಭಾರತದಲ್ಲಿ ಈ ಚಿತ್ರದ ಪ್ರಸಾರವನ್ನು ಸ್ಥಗಿತಗೊಳಿಸಿರುವ ಬೆನ್ನಲ್ಲೇ ಲೈವ್ ಸೆಷನ್ ಮೂಲಕ ಅಭಿಮಾನಿಗಳೊಂದಿಗೆ ದಿಲ್ಜಿತ್ ದೋಸಾಂಜ್ ಮಾತನಾಡಿದ್ದಾರೆ. ಸಿನಿಮಾ ಡೌನ್‌ಲೋಡ್ ಮಾಡಿಕೊಂಡಿರುವವರು ಅದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ದಿಲ್ಜಿತ್ ಮನವಿ ಮಾಡಿದ್ದಾರೆ.
ಚಿತ್ರವನ್ನು ದಿಢೀರ್ ಆಗಿ ತೆಗೆದುಹಾಕಿರುವ ನಡೆ ಅನೇಕ ವೀಕ್ಷಕರಿಗೆ ಆಘಾತ ತಂದಿದ್ದರೂ, ದಿಲ್ಜಿತ್ ದೋಸಾಂಜ್‌ಗೆ ಇದು ಮೊದಲೇ ತಿಳಿದಿತ್ತಂತೆ. ‘ಈ ಘಟನೆ 1995ರಲ್ಲಿ ನಡೆದಿತ್ತು, ಆಗಲೂ ಜನರ ಬಾಯಿ ಮುಚ್ಚಿಸಲಾಗಿತ್ತು. ಇಂದು 2026ರಲ್ಲೂ ಅದೇ ಆಗುತ್ತಿದೆ, ಹದ್ದು ಮೀರಿದೆ. ನನಗೆ ಸ್ವಲ್ಪ ಬೇಸರವಾಗಿದೆ. ನಾವು ಇಂದಿಗೂ ಅಲ್ಲೇ ನಿಂತಿದ್ದೇವೆ’ ಎಂದು ದಿಲ್ಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಸಾಯುವವರೆಗೂ ನಾನು ಪಂಜಾಬ್ ಪರ’
ಚಿತ್ರದ ಬಿಡುಗಡೆಗೂ ಮುನ್ನ ಯಾವುದೇ ಪ್ರಚಾರ ಮಾಡದಿರಲು ಇದೇ ಕಾರಣವಾಗಿತ್ತು ಎಂದು ದಿಲ್ಜಿತ್ ದೋಸಾಂಜ್ ಅವರು ಬಹಿರಂಗಪಡಿಸಿದ್ದಾರೆ. ‘ನಾವು ಎರಡು ದಿನ ಮುಂಚಿತವಾಗಿ ಪ್ರಚಾರ ಮಾಡಿದ್ದರೆ, ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ. ಆದರೆ ಈಗ ಸಿನಿಮಾ ಪ್ರತಿಯೊಬ್ಬರ ಮನೆ ತಲುಪಿದೆ, ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಹೊಸ ಪೀಳಿಗೆ ಇದರ ಬಗ್ಗೆ ಮಾತನಾಡುತ್ತಿದೆ ಎಂಬ ನೆಮ್ಮದಿ ನನಗಿದೆ. ನೀವು ನನ್ನನ್ನು ಎಷ್ಟು ಬೇಕಾದರೂ ಕಾಡಬಹುದು, ಆದರೆ ಸಾಯುವವರೆಗೂ ನಾನು ಪಂಜಾಬ್ ಪರವಾಗಿ ನಿಲ್ಲುತ್ತೇನೆ’ ಎಂದು ಅವರು ಹೇಳಿದ್ದಾರೆ.
4 ವರ್ಷಗಳ ಸೆನ್ಸಾರ್ ಹೋರಾಟ
ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಈ ಚಿತ್ರವು ಮೊದಲು ‘ಪಂಜಾಬ್ 95’ ಎಂಬ ಹೆಸರಿನಲ್ಲಿ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗಕ್ಕೆ ಸಿಲುಕಿತ್ತು. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಬರೋಬ್ಬರಿ 127 ಕಟ್‌ಗಳನ್ನು ಸೂಚಿಸಿತ್ತು. ಸುಮಾರು ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ, ಜುಲೈ 3ರಂದು ‘ಸತ್ಲುಜ್’ ಎಂಬ ಹೊಸ ಹೆಸರಿನೊಂದಿಗೆ ಝೀ5 ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಆದರೆ ಜುಲೈ 5ರ ಭಾನುವಾರ ಸಂಜೆಯ ವೇಳೆಗೆ ಭಾರತದಲ್ಲಿ ಚಿತ್ರವನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: ದಿಲ್ಜಿತ್ ದೋಸಾಂಜ್ ಸತ್ಲುಜ್ ಸಿನಿಮಾ ಒಟಿಟಿಯಿಂದ ಡಿಲೀಟ್ ಆಗಿದ್ದಕ್ಕೆ ಸಿಕ್ತು ಕಾರಣ
ಇಂಟರ್ನೆಟ್‌ನಿಂದ ಅಳಿಸಲು ಸಾಧ್ಯವಿಲ್ಲ!
ಸಿನಿಮಾ ಈಗಾಗಲೇ ಇಂಟರ್ನೆಟ್‌ನಲ್ಲಿ ಲಭ್ಯವಿರುವುದರಿಂದ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ದಿಲ್ಜಿತ್ ಅಭಿಪ್ರಾಯಪಟ್ಟಿದ್ದಾರೆ. ‘ಒಮ್ಮೆ ಯಾವುದಾದರೂ ವಸ್ತು ಆನ್‌ಲೈನ್‌ಗೆ ಬಂದರೆ ಅದನ್ನು ಅಳಿಸಲು ಸಾಧ್ಯವಿಲ್ಲ ಎಂದು ಯೋಚಿಸದವರು ಮುಗ್ಧರು ಅಥವಾ ಅವಿದ್ಯಾವಂತರು. ಇದು ಈಗ ಜನರ ಸಿನಿಮಾ. ರಾಜಸ್ಥಾನದ ಹಳ್ಳಿಯೊಂದರಲ್ಲಿ ಮತ್ತು ಗುರುದ್ವಾರದ ಒಳಗೆ ಈ ಸಿನಿಮಾವನ್ನು ವೀಕ್ಷಿಸುತ್ತಿರುವ ವಿಡಿಯೋಗಳನ್ನು ನಾನು ನೋಡಿದೆ. ನನ್ನ ಶ್ರಮ ಜನರನ್ನು ತಲುಪಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
