ನವದೆಹಲಿ, ಆಗಸ್ಟ್ 14: ಲಾರ್ಸೆನ್ ಅಂಡ್ ಟೂಬ್ರೊ (L&T) ಭಾರತದಲ್ಲಿಯೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ (Rare-earth magnets) ತಯಾರಿಸಲು ಯೋಜನೆ ರೂಪಿಸುತ್ತಿದೆ. ಇದು ಈಡೇರಿದ್ದೇ ಆದಲ್ಲಿ, ಚೀನಾದ ಮೇಲಿನ ಭಾರತದ ಪ್ರಮುಖ ಅವಲಂಬನೆಯೊಂದು ಕಡಿಮೆ ಆಗಲಿದೆ. ಕೇಂದ್ರ ಸರ್ಕಾರವು ದೇಶೀಯವಾಗಿ ಲಭ್ಯ ಇರುವ ವಿರಳ ಭೂ ಖನಿಜಗಳನ್ನು ತಯಾರಿಸಲು ವಿವಿಧ ಯೋಜನೆಗಳನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ, ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಈ ಕಾರ್ಯಕ್ಕೆ ಕೈಹಾಕಲು ಯೋಜಿಸುತ್ತಿದೆ.
ಜಾಗತಿಕವಾಗಿ ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಚೀನಾ ಸುಮಾರು 90% ಹಿಡಿತ ಹೊಂದಿದೆ. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ಭಾರತದಲ್ಲಿಯೇ ದೇಶಿಯ ಪೂರೈಕೆ ಸರಪಳಿಯನ್ನು (Domestic Supply Chain) ಬಲಪಡಿಸಲು ಎಲ್&ಟಿ ಮುಂದಾಗಿದೆ.
ಇದನ್ನೂ ಓದಿ: ಸರಕುಗಳ ಮೇಲೆ ಟ್ಯಾರಿಫ್ ತಪ್ಪಿಸಲು ಚೀನಾದ ಕಳ್ಳದಾರಿಗಳಲ್ಲಿ ಭಾರತವೂ ಒಂದು: ಅಮೆರಿಕ ಗಂಭೀರ ಆರೋಪ
ಈ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಸುಮಾರು 7,280 ಕೋಟಿ ರೂಪಾಯಿಗಳ ಪ್ರೋತ್ಸಾಹಕ ಯೋಜನೆಯನ್ನು (Incentive Policy) ಘೋಷಿಸಿದೆ. ಎಲ್&ಟಿ ಈ ಯೋಜನೆಯಡಿ ಬಿಡ್ ಮಾಡಲು ತಯಾರಿ ನಡೆಸುತ್ತಿದೆ. ಎಲ್ ಅಂಡ್ ಟಿಯದ್ದು ಸೇರಿದಂತೆ ಒಟ್ಟು 15 ಬಿಡ್ಗಳು ಸಲ್ಲಿಕೆಯಾಗಿರುವುದು ತಿಳಿದುಬಂದಿದೆ. ಜಪಾನ್ನ ಪ್ರೋಟೆರಿಯಲ್ ಲಿಮಿಟೆಡ್ ಕಂಪನಿ ಒಳಗೊಂಡ ಒಂದು ಗುಂಪು ಹಾಗೂ ಒಂದೆರಡು ಭಾರತೀಯ ವಾಹನ ಕಂಪನಿಗಳೂ ಕೂಡ ಬಿಡ್ ಸಲ್ಲಿಸಿವೆ ಎನ್ನಲಾಗಿದೆ.
ಈ ವಿರಳ ಭೂ ಖನಿಜ ಅಯಸ್ಕಾಂತಗಳು ಯಾಕೆ ಮುಖ್ಯ?
ರೇರ್ ಅರ್ಥ್ ಮ್ಯಾಗ್ನೆಟ್ಗಳು ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್ಗಳು, ವಿಂಡ್ ಟರ್ಬೈನ್ಗಳು, ಕೈಗಾರಿಕಾ ರೋಬೋಟ್ಗಳು ಮತ್ತು ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಅತ್ಯಗತ್ಯವಾಗಿವೆ. ಎಲ್&ಟಿ ತನ್ನ ಎಲೆಕ್ಟ್ರಿಕ್ ವಾಹನ ಮೋಟಾರ್ ತಯಾರಿಕಾ ಯೋಜನೆಗೂ ಈ ಮ್ಯಾಗ್ನೆಟ್ಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.
ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್: ಓಲಾ, ಉಬರ್, ರ್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
ಈ ಕ್ಷೇತ್ರವು ಉನ್ನತ ಮಟ್ಟದ ನಿಖರ ಇಂಜಿನಿಯರಿಂಗ್ ಅನ್ನು ಬೇಡುವುದರಿಂದ, ಸೂಕ್ತ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಪಾಲುದಾರರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎಲ್&ಟಿ ತೊಡಗಿದೆ.
ಒಟ್ಟಾರೆಯಾಗಿ, ಎಲ್&ಟಿಯ ಈ ಹೆಜ್ಜೆಯು ಭಾರತದ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ