
ಭಾರತೀಯ ಸಿನಿಮಾಗಳಲ್ಲಿ (Indian Cinema) ಸ್ಟಾರ್ ನಟರಿಗೆ ಸಿಕ್ಕಷ್ಟು ಸಂಭಾವನೆ, ಮಾನ್ಯತೆ ಸಿನಿಮಾದ ಇನ್ಯಾವುದೇ ವಿಭಾಗದ ಇನ್ಯಾವುದೇ ತಂತ್ರಜ್ಞರಿಗೆ ದೊರೆಯುವುದಿಲ್ಲ. ಸಂಗೀತ ನಿರ್ದೇಶಕರನ್ನಂತೂ ಕೇಳುವವರೇ ಇಲ್ಲ. ಎಷ್ಟೋ ಬಾರಿ ಕೇವಲ ಸಂಗೀತದಿಂದಲೇ ಸಿನಿಮಾಗಳು ಗೆದ್ದಿರುವುದುಂಟು. ಆದರೂ ಸಹ ಸಂಗೀತ ನಿರ್ದೇಶಕರಿಗೆ ಅವರ ಪ್ರತಿಭೆಗೆ ತಕ್ಕಷ್ಟು ಸೂಕ್ತ ಸಂಭಾವನೆ ದೊರೆಯುವುದಿಲ್ಲ. ಇದೀಗ ಎಆರ್ ರೆಹಮಾನ್ ಅವರಿಗೆ ಭಾರಿ ಮೊತ್ತದ ಸಂಭಾವನೆ ದೊರೆತಿದ್ದು, ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಇಷ್ಟು ದೊಡ್ಡ ಸಂಭಾವನೆ ದೊರೆತಿಲ್ಲ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ‘ರಾಮಾಯಣ’ ಸಿನಿಮಾಕ್ಕಾಗಿ ಎಆರ್ ರೆಹಮಾನ್ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಯಾವುದೇ ಸಂಗೀತ ನಿರ್ದೇಶಕರು ಇದುವರೆಗೆ ಪಡೆದ ಅತಿ ದೊಡ್ಡ ಸಂಭಾವನೆ ಪಡೆದಿದ್ದೇ ಇಲ್ಲ. ಅವರು ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಗೀತ ನೀಡಿರುವ ಹಾನ್ಸ್ ಜಿಮ್ಮರ್ ಸಹ ಭಾರಿ ಮೊತ್ತದ ಸಂಭಾವನೆಯನ್ನು ಈ ಸಿನಿಮಾಕ್ಕೆ ಪಡೆಯುತ್ತಿದ್ದಾರೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು ಕಲಾವಿದರು ಮತ್ತು ತಂತ್ರಜ್ಞರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡಲಾಗಿದೆ.
ಎಆರ್ ರೆಹಮಾನ್ ಈ ಚಿತ್ರಕ್ಕಾಗಿ ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ಜೊತೆಗೆ ಒಪ್ಪಂದದಲ್ಲಿ ಪಾಲು ಸಹ ಪಡೆಯಲಿದ್ದಾರೆ. ಆಡಿಯೋ ಹಕ್ಕುಗಳು ಮಾರಾಟವಾಗುವ ಮೊತ್ತದಲ್ಲಿ ಸಹ ಎಆರ್ ರೆಹಮಾನ್ ಅವರಿಗೆ ನಿರ್ದಿಷ್ಟ ಪಾಲು ಸಿಗಲಿದೆ ಎನ್ನಲಾಗುತ್ತಿದೆ. ‘ರಾಮಾಯಣ’ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಹ್ಯಾನ್ಸ್ ಜಿಮ್ಮರ್ ಅವರನ್ನು ಸಹ ಸಂಗೀತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:‘ಧುರಂಧರ್’ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಮೊದಲು ಹೋಗಿದ್ದು ದಕ್ಷಿಣದ ಈ ಸ್ಟಾರ್ ನಟನಿಗೆ
‘ರಾಮಾಯಣ’ ಸಿನಿಮಾವು ಭಾರತದ ಈ ವರೆಗೆ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾಕ್ಕೆ 4000 ಕೋಟಿ ಬಜೆಟ್ ಹೂಡಲಾಗಿದೆ. ಸಿನಿಮಾದ ನಾಯಕ ರಣ್ಬೀರ್ ಕಪೂರ್ ಅವರಿಗೆ 150 ಕೋಟಿಗೂ ಹೆಚ್ಚು ಸಂಭಾವನೆ ನೀಡಲಾಗಿದೆಯಂತೆ. ಇನ್ನು ನಟ ಯಶ್ಗೆ ಸುಮಾರು 100 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ. ನಿರ್ದೇಶಕ ನಿತೀಶ್ ತಿವಾರಿಗೆ 50 ಕೋಟಿ ಸಂಭಾವನೆ ಕೊಡಲಾಗಿದೆಯಂತೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗ ದೀಪಾವಳಿಯಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ