‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ – Kannada News | Iran will never forget India; Tehran Thank You Note Amid Ayatollah Ali Khamenei Funeral

ಟೆಹ್ರಾನ್, ಜುಲೈ 6: ಭಾರತವು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಇರಾನ್ ಸರ್ಕಾರವು ಇಂದು (ಸೋಮವಾರ) ಭಾರತಕ್ಕೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದೆ. ಕಳೆದ ಫೆಬ್ರವರಿ 28ರಂದು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Seyyed Ali Khamene) ಮೃತಪಟ್ಟಿದ್ದರು. ಇರಾನ್​ನಲ್ಲಿ ನಡೆದ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳಲ್ಲಿ ಭಾರತೀಯ ನಿಯೋಗ ಭಾಗವಹಿಸಿದ್ದಕ್ಕಾಗಿ ಇರಾನ್ ಕೃತಜ್ಞತೆ ಸಲ್ಲಿಸಿದೆ.

ಫೆಬ್ರವರಿ ತಿಂಗಳಲ್ಲಿ ಟೆಹ್ರಾನ್‌ನಲ್ಲಿ ನಡೆದ ಯುಎಸ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇರಾನ್‌ನ ಸುಪ್ರೀಂ ನಾಯಕನಿಗೆ ಬಿಹಾರದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೇನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರನ್ನೊಳಗೊಂಡ ಉನ್ನತ ಮಟ್ಟದ ಭಾರತೀಯ ನಿಯೋಗವು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿತು.

ಇದನ್ನೂ ಓದಿ: ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ

ಇದರೊಂದಿಗೆ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಭಾರತದ ಸಿಖ್, ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಮುಖ ಧಾರ್ಮಿಕ ಮುಖಂಡರು ಇರಾನ್‌ನ ದಿವಂಗತ ನಾಯಕನಿಗೆ ಗೌರವ ನಮನ ಸಲ್ಲಿಸಿದರು.

ಇರಾನ್ ಹೇಳಿದ್ದೇನು?:

ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಇರಾನ್ ರಾಯಭಾರ ಕಚೇರಿಯು, ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಭಾರತೀಯ ಸಮುದಾಯಕ್ಕೆ ಧನ್ಯವಾದ ತಿಳಿಸಿದೆ. ಅಲ್ಲದೆ ಇರಾನ್ ಸ್ನೇಹ, ಸಹಾನುಭೂತಿ ಮತ್ತು ಹೃತ್ಪೂರ್ವಕ ಗೌರವದ ನಡವಳಿಕೆಯನ್ನು ಇರಾನ್ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದೆ.

“ಇರಾನ್‌ನ ಹುತಾತ್ಮ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ, ಗೌರವ ಸಲ್ಲಿಸಿದ ಭಾರತದ ಸ್ನೇಹಪರ ಸರ್ಕಾರ ಮತ್ತು ಜನತೆಗೆ, ವಿಶೇಷವಾಗಿ ಭಾರತ ಸರ್ಕಾರದ ಪರವಾಗಿ ಭಾಗವಹಿಸಿದ ಅಧಿಕೃತ ನಿಯೋಗಕ್ಕೆ ಭಾರತದಲ್ಲಿನ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ರಾಯಭಾರ ಕಚೇರಿಯು ತನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಪ್ರಾಮಾಣಿಕ ಪ್ರಶಂಸೆಯನ್ನು ಸಲ್ಲಿಸುತ್ತದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಈ ಗಂಭೀರ ಶೋಕಾಚರಣೆಯ ಸಂದರ್ಭದಲ್ಲಿ ಭಾರತದ ರಾಜಕೀಯ ನಾಯಕರು, ಸಂಸದರು, ಪ್ರಖ್ಯಾತ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ವಿವಿಧ ಧರ್ಮ ಹಾಗೂ ಸಮುದಾಯಗಳ ಮುಖಂಡರು ಉಪಸ್ಥಿತರಿರುವುದು ನಮ್ಮ ಉಭಯ ದೇಶಗಳ ನಡುವಿನ ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮಾನವೀಯ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅದು ಉಲ್ಲೇಖಿಸಿದೆ.

ಇದನ್ನೂ ಓದಿ: ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ

“ರಾಷ್ಟ್ರೀಯ ಶೋಕಾಚರಣೆಯ ಈ ಕಠಿಣ ಸಮಯದಲ್ಲಿ ಇದು ಇರಾನ್ ಜನತೆಯೊಂದಿಗೆ ಭಾರತ ವ್ಯಕ್ತಪಡಿಸಿದ ಪರಸ್ಪರ ಗೌರವ ಮತ್ತು ಪ್ರಾಮಾಣಿಕ ಒಗ್ಗಟ್ಟಿನ ಶಕ್ತಿಯುತ ಅಭಿವ್ಯಕ್ತಿಯಾಗಿದೆ. ಇರಾನ್‌ನ ಜನತೆ ಈ ಸ್ನೇಹ ಮತ್ತು ಸಹಾನುಭೂತಿಯನ್ನು ಎಂದಿಗೂ ಮರೆಯುವುದಿಲ್ಲ. ಇರಾನ್ ಮತ್ತು ಭಾರತದ ನಡುವಿನ ಶಾಶ್ವತ ಬಾಂಧವ್ಯಕ್ಕೆ ಇದು ಒಂದು ಅಮೂಲ್ಯ ಸಾಕ್ಷಿಯಾಗಿದೆ” ಎಂದು ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಅಲಿ ಖಮೇನಿ ಅಂತ್ಯಕ್ರಿಯೆ:

ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ‘ಪ್ರೆಸ್ ಟಿವಿ’ ವರದಿ ಮಾಡಿರುವ ಪ್ರಕಾರ, ಅಲಿ ಖಮೇನಿ ಅವರ ಅಂತಿಮ ಯಾತ್ರೆಯು ಇಂದು ಮುಂಜಾನೆ ಟೆಹ್ರಾನ್‌ನಲ್ಲಿ ಪ್ರಾರಂಭವಾಯಿತು. ಇರಾನ್‌ನ ಆಧುನಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾರ್ವಜನಿಕ ಸಭೆ ಇದಾಗಿದ್ದು, ಅಂತಿಮ ದರ್ಶನ ಪಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಹರಿದುಬಂದಿದ್ದರಿಂದ ಈ ಮೆರವಣಿಗೆಯು ಸುಮಾರು 10ರಿಂದ 12 ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ.

ಫೆಬ್ರವರಿ 28ರಂದು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಆರಂಭಿಸಿದ ಯುದ್ಧದ ಆರಂಭದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಖಮೇನಿ ಮತ್ತು ಅವರ ಕುಟುಂಬಸ್ಥರು ಸಾವನ್ನಪ್ಪಿದ್ದರು. ಖಮೇನಿ ಅವರ ಪಾರ್ಥಿವ ಶರೀರವನ್ನು ಹೊಂದಿರುವ ಶವಪೆಟ್ಟಿಗೆಯನ್ನು ಇಮಾಮ್ ಅವರ ಮಸೀದಿಯ ಅಲಂಕಾರಿಕ ವಿನ್ಯಾಸದಂತೆ ಸಿದ್ಧಪಡಿಸಲಾದ ವಿಶೇಷ ಟ್ರಕ್‌ನಲ್ಲಿ ಇರಿಸಲಾಗಿತ್ತು. ಇರಾನ್ ಸಂಪ್ರದಾಯದ ಪ್ರಕಾರ ಆಶೀರ್ವಾದ ಪಡೆಯಲು ಜನರು ತಮ್ಮ ಸ್ಕಾರ್ಫ್ ಮತ್ತು ಇತರ ವಸ್ತುಗಳನ್ನು ಶವಪೆಟ್ಟಿಗೆಯ ಮೇಲೆ ಹಾಕುತ್ತಿದ್ದರು. ಬೇಸಿಗೆಯ ಬಿಸಿಲಿನ ತಾಪವನ್ನು ತಣಿಸಲು ಭದ್ರತಾ ಸಿಬ್ಬಂದಿ ಜನರ ಮೇಲೆ ನೀರನ್ನು ಸ್ಪ್ರೇ ಮಾಡುತ್ತಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *