ನವದೆಹಲಿ, ಜೂನ್ 5: ಎನ್ಆರ್ಐಗಳು (ಅನಿವಾಸಿ ಭಾರತೀಯರು) ಮತ್ತು ಒಸಿಐಗಳು (OCI – ಸಾಗರೋತ್ತರ ಭಾರತೀಯ ನಾಗರಿಕರು) ಸೆಬಿ (SEBI) ಬಳಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲದೇ, ಭಾರತೀಯ ಷೇರು ಮಾರುಕಟ್ಟೆಯಲ್ಲಿ (stock market) ನೇರವಾಗಿ ಹೂಡಿಕೆ ಮಾಡಲು ಇರುವ ಹಣದ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಎಂಪಿಸಿ ಸಭೆ ನಂತರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ.
ಈವರೆಗೆ ಇಂತಹ ಹೂಡಿಕೆಗೆ ಕಟ್ಟುನಿಟ್ಟಾದ ಮಿತಿಗಳಿದ್ದವು. ಆ ಮಿತಿಗಳನ್ನು ಸಡಿಲಗೊಳಿಸುವುದರಿಂದ, ಅನಿವಾಸಿ ಭಾರತೀಯರಿಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗಲಿದೆ.
ಈ ಕ್ರಮದಿಂದ ಆಗುವ ಲಾಭಗಳೇನು?
- ಎನ್ಆರ್ಐ ಮತ್ತು ಒಸಿಐ ಸಮುದಾಯದಿಂದ ಭಾರತದ ಬಂಡವಾಳ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿಯಲು ಇದು ದಾರಿ ಮಾಡಿಕೊಡುತ್ತದೆ.
- ಸೆಬಿ ನೋಂದಣಿಯ ಜಟಿಲ ಪ್ರಕ್ರಿಯೆಗಳನ್ನು ತಪ್ಪಿಸುವುದರಿಂದ, ಸಣ್ಣ ಪ್ರಮಾಣದ ಹೂಡಿಕೆದಾರರು ಕೂಡ ಸುಲಭವಾಗಿ ಭಾರತೀಯ ಷೇರುಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
- ಅನಿವಾಸಿ ಭಾರತೀಯರ ಹಣವು ದೇಶೀಯ ಮಾರುಕಟ್ಟೆಗೆ ಬಂದಾಗ, ಅದು ಷೇರು ಮಾರುಕಟ್ಟೆಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಗೆ ಪೂರಕವಾಗುತ್ತದೆ.
- ತಮ್ಮ ತಾಯ್ನಾಡಿನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವ ಲಕ್ಷಾಂತರ ಅನಿವಾಸಿ ಭಾರತೀಯರಿಗೆ ಇದು ಉತ್ತಮ ಅವಕಾಶವಾಗಿದೆ.
ಇದನ್ನೂ ಓದಿ: ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ
ಆರ್ಬಿಐ ಗವರ್ನರ್ಗಳ ಈ ಕ್ರಮವು, ಹೂಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಜಾಗತಿಕವಾಗಿರುವ ಭಾರತೀಯರ ಬಂಡವಾಳವನ್ನು ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಇದು ಭಾರತೀಯ ಷೇರು ಮಾರುಕಟ್ಟೆಯ ವಿಸ್ತರಣೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ