2025ರಲ್ಲಿ ಶಿಪ್ಕಿ ಲಾ ಪಾಸ್ ಬಳಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಮತ್ತಿತರರುImage Credit source: PTI
ನವದೆಹಲಿ, ಆಗಸ್ಟ್ 2: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಐತಿಹಾಸಿಕ ಶಿಪ್ಕಿ ಲಾ (Shipki La) ಕಣಿವೆ ಮೂಲಕ ಭಾರತ ಮತ್ತು ಚೀನಾ (ಟಿಬೆಟ್) ನಡುವಿನ ಗಡಿ ವ್ಯಾಪಾರವು 6 ವರ್ಷಗಳ ವಿರಾಮದ ನಂತರ ಪುನರಾರಂಭಗೊಂಡಿದೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಗಡಿಭಾಗದಲ್ಲಿ ಉಂಟಾದ ಮಿಲಿಟರಿ ಉದ್ವಿಗ್ನತೆಯಿಂದಾಗಿ ಈ ವಿಶಿಷ್ಟ ವ್ಯಾಪಾರ ಮಾರ್ಗವನ್ನು ಮುಚ್ಚಲಾಗಿತ್ತು. ಈಗ ಭಾರತ-ಚೀನಾ ನಡುವಿನ ಗಡಿ ವ್ಯಾಪಾರ ಪುನರಾರಂಭಗೊಂಡಿರುವುದು ಪ್ರಾಚೀನ ‘ರೇಷ್ಮೆ ಮಾರ್ಗ’ಕ್ಕೆ (Silk Route) ಮರುಜೀವ ನೀಡಿದೆ.
ಹಿಮಾಚಲ ಪ್ರದೇಶದ ಕಂದಾಯ ಮತ್ತು ತೋಟಗಾರಿಕೆ ಸಚಿವ ಜಗತ್ ಸಿಂಗ್ ನೇಗಿ ಅವರು ಸಾಂಪ್ರದಾಯಿಕ ಖತಾಕ್ (ಗೌರವದ ಶಾಲು) ನೀಡಿ 16 ನೋಂದಾಯಿತ ಭಾರತೀಯ ವ್ಯಾಪಾರಿಗಳ ಮೊದಲ ತಂಡವನ್ನು ಟಿಬೆಟ್‌ನ ಶಿಪ್ಕಿ ಗ್ರಾಮದ ಕಡೆಗೆ ಬೀಳ್ಕೊಟ್ಟರು.
ಛುಪ್ಪನ್ ಟ್ರೇಡ್ ಮಾರ್ಟ್ ಉದ್ಘಾಟನೆ: ಗಡಿ ವ್ಯಾಪಾರ ನಿರ್ವಹಣೆ, ಕಸ್ಟಮ್ಸ್ ಪ್ರಕ್ರಿಯೆ ಮತ್ತು ವ್ಯಾಪಾರಿಗಳ ನೋಂದಣಿಗೆ ಅನುಕೂಲವಾಗುವಂತೆ ಕಿನ್ನೌರ್‌ನ ನಾಮ್ಗ್ಯಾ ಪಂಚಾಯತ್ ವ್ಯಾಪ್ತಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಛುಪ್ಪನ್ ಟ್ರೇಡ್ ಮಾರ್ಟ್ (Chhuppan Trade Mart) ಅನ್ನು ಸಚಿವರು ಉದ್ಘಾಟಿಸಿದರು.
ಇಲ್ಲಿ ಹಣ ಇಲ್ಲ, ಬಾರ್ಟರ್ ಸಿಸ್ಟಂ
ಶಿಪ್ಕಿ ಲಾ ಮಾರ್ಗದ ವ್ಯಾಪಾರವು ಹಣದ ವಹಿವಾಟಿನ ಬದಲು ಸಾಂಪ್ರದಾಯಿಕ ‘ವಸ್ತು ವಿನಿಮಯ’ ಅಥವಾ ಬಾರ್ಟರ್ ಸಿಸ್ಟಂ (Barter System) ಮೂಲಕ ನಡೆಯುತ್ತದೆ. ಇಲ್ಲಿ ಬಾರ್ಟರ್ ಸಿಸ್ಟಂ ಹಲವು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ವ್ಯಾಪಾರ ಪದ್ಧತಿಯಾಗಿದೆ.
ಭಾರತದಲ್ಲಿರುವ ವ್ಯಾಪಾರಿಗಳು ತಮ್ಮ ಸರಕುಗಳನ್ನು ಮೊದಲು ರಸ್ತೆ ಮೂಲಕ ಗಡಿಭಾಗಕ್ಕೆ ಸಾಗಿಸುತ್ತಾರೆ. ಗುಡ್ಡಗಾಡು ಜಾಗವಾದ್ದರಿಂದ ಸರಕುಗಳನ್ನು ಅಲ್ಲಿಂದ ಪ್ರಾಣಿಗಳ ಮೇಲೆ ಹೊರಿಸಿ ನಿಗದಿತ ವಿನಿಮಯ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಟಿಬೆಟ್ನಿಂದ ಎರಡು ಕಿಮೀ ಒಳಗೆ ಈ ಕೇಂದ್ರ ಇರುತ್ತದೆ.
ಈ ಸೀಸನ್‌ನಲ್ಲಿ ಗಡಿ ವ್ಯಾಪಾರಕ್ಕಾಗಿ 88 ಅರ್ಜಿದಾರರ ಪೈಕಿ 53 ವ್ಯಾಪಾರಿಗಳಿಗೆ ಗೃಹ ಇಲಾಖೆಯಿಂದ ಭದ್ರತಾ ತಪಾಸಣೆ ನಡೆಸಿ ಅನುಮತಿ ನೀಡಲಾಗಿದೆ.
72 ಗಂಟೆಗಳ ಸಮಯ ಮಿತಿ: ನಿಯಮಾವಳಿಗಳ ಪ್ರಕಾರ, ಟಿಬೆಟ್ ಪ್ರದೇಶಕ್ಕೆ ಪ್ರವೇಶಿಸುವ ಭಾರತೀಯ ವ್ಯಾಪಾರಿಗಳು ಗರಿಷ್ಠ 72 ಗಂಟೆಗಳ ಒಳಗಾಗಿ ಭಾರತಕ್ಕೆ ಹಿಂತಿರುಗಬೇಕಾಗುತ್ತದೆ.
ಪ್ರಮುಖ ರಫ್ತು ಮತ್ತು ಆಮದು ವಸ್ತುಗಳು
ಕೇಂದ್ರ ವಾಣಿಜ್ಯ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತ ಮತ್ತು ಟಿಬೆಟ್ (ಚೀನಾ) ನಡುವೆ ವಿನಿಮಯ ಮಾಡಿಕೊಳ್ಳಬಹುದಾದ ಪ್ರಮುಖ ವಸ್ತುಗಳು ಈ ಕೆಳಕಂಡಂತಿವೆ:
ಭಾರತದಿಂದ ರಫ್ತಾಗುವ ವಸ್ತುಗಳು
- ಡ್ರೈಫ್ರೂಟ್ಸ್ ಮತ್ತು ಮಸಾಲೆ ಪದಾರ್ಥಗಳು
- ಚಹಾ, ಕಾಫಿ ಮತ್ತು ಧಾನ್ಯಗಳು
- ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು
- ತಾಮ್ರದ ಪಾತ್ರೆಗಳು
- ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಸಂಸ್ಕರಿಸಿದ ಆಹಾರ
ಟಿಬೆಟ್ನಿಂದ ಪೂರೈಕೆಯಾಗುವ ಸರಕುಗಳು
- ಪಶ್ಮೀನಾ ಉಣ್ಣೆ
- ಕಚ್ಚಾ ಉಣ್ಣೆ ಮತ್ತು ಯಾಕ್ (ಹಿಮಾಲಯನ್ ಹಸು) ಕೂದಲು
- ಜಮಖಾನ (Carpets) ಮತ್ತು ಕುರಿ ಚರ್ಮ
- ಚೈನಾ ಕ್ಲೇ (China Clay)
- ಸಾಂಪ್ರದಾಯಿಕ ಚೈನೀಸ್ ಗಿಡಮೂಲಿಕೆ ಉತ್ಪನ್ನಗಳು
ಜೀವಂತ ಪ್ರಾಣಿಗಳ (ಕುರಿ, ಮೇಕೆ, ಕುದುರೆ) ವ್ಯಾಪಾರಕ್ಕೆ ಕ್ವಾರಂಟೈನ್ ಕೇಂದ್ರದ ಕೊರತೆಯಿಂದಾಗಿ ಈ ಬಾರಿ ಅನುಮತಿ ನೀಡಿಲ್ಲ.
ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ
ಪ್ರಾದೇಶಿಕ ಆರ್ಥಿಕತೆಗೆ ನೆರವು
ನವೆಂಬರ್ 30ರವರೆಗೆ ನಡೆಯಲಿರುವ ಈ ಗಡಿ ವ್ಯಾಪಾರ ಕಾರಿಡಾರ್ ಪುನರಾರಂಭದಿಂದ ಹಿಮಾಚಲ ಪ್ರದೇಶದ ಗಡಿ ಭಾಗದ ನಿವಾಸಿಗಳಿಗೆ, ಸಾರಿಗೆ ಕ್ಷೇತ್ರಕ್ಕೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
