ಇಂಡೋನೇಷ್ಯಾದಲ್ಲಿ ಅಲ್ಲಿನ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿImage Credit source: AP
ಭಾರತ ಮತ್ತು ಇಂಡೋನೇಷ್ಯಾ ನಡುವೆ 2,000 ವರ್ಷಗಳಿಗಿಂತಲೂ ಹಳೆಯದಾದ ನಾಗರಿಕತೆಯ ಸಂಬಂಧವಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಈ ಪುರಾತನ ಬಾಂಧವ್ಯವನ್ನು ಬಲಿಷ್ಠ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲಾಗುತ್ತಿದೆ. ಭಾರತವು ತನ್ನ ಸಂಸ್ಕೃತಿಯನ್ನು ಕೇವಲ ಇತಿಹಾಸವಾಗಿ ನೋಡುತ್ತಿಲ್ಲ. ಬದಲಿಗೆ ಭವಿಷ್ಯದ ಪಾಲುದಾರಿಕೆಯನ್ನು ನಿರ್ಮಿಸಲು ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ, ಯೋಗ್ಯಕರ್ತಾದಲ್ಲಿರುವ 9ನೇ ಶತಮಾನದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬನನ್ ಹಿಂದೂ ದೇವಾಲಯ ಸಂಕೀರ್ಣದ (ತ್ರಿಮೂರ್ತಿಗಳಿಗೆ ಸಮರ್ಪಿತವಾದ ದೇವಾಲಯ) ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಭಾರತ ನೆರವು ನೀಡಲಿದೆ.
- ಬಾಂಧವ್ಯದ ಪ್ರತೀಕ: ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ತಮ್ಮಲ್ಲಿ ಭಾರತೀಯ ಡಿಎನ್‌ಎ ಇದೆ ಎಂದು ಹೇಳಿರುವುದು ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಶ್ಲಾಘಿಸಿರುವುದು ಭಾರತದ ಬೆಳೆಯುತ್ತಿರುವ ಸಾಂಸ್ಕೃತಿಕ ಪ್ರಭಾವವನ್ನು ತೋರಿಸುತ್ತದೆ.
- ರಾಜತಾಂತ್ರಿಕ ಬದಲಾವಣೆ: 1965 ರ ಯುದ್ಧದಲ್ಲಿ ಇಂಡೋನೇಷ್ಯಾ ಪಾಕಿಸ್ತಾನವನ್ನು ಬೆಂಬಲಿಸಿತ್ತು. ಆದರೆ ಇಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಅದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಅತ್ಯಂತ ಮಹತ್ವದ ಸ್ಟ್ರಾಟಿಜಿಕ್ ಪಾರ್ಟ್ನರ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
- ಬಿಂಟಾಂಗ್ ಆದಿಪೂರ್ಣ ಪ್ರಶಸ್ತಿ: ಪ್ರಧಾನಿ ಮೋದಿಯವರಿಗೆ ಇಂಡೋನೇಷ್ಯಾ ನೀಡಿದ ಅತ್ಯುನ್ನತ ನಾಗರಿಕ ಗೌರವವಾದ ಬಿಂಟಾಂಗ್ ಆದಿಪೂರ್ಣ ಕೇವಲ ಒಬ್ಬ ನಾಯಕನಿಗೆ ಸಂದ ಗೌರವವಲ್ಲ; ಇದು ಭಾರತದ ಪ್ರಾಚೀನ ನಾಗರಿಕತೆ ಮತ್ತು ಉಭಯ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಕ್ಕೆ ಸಂದ ಮನ್ನಣೆಯಾಗಿದೆ.
- ಹಂಚಿಕೆಯ ಸಂಕೇತಗಳು: ರಾಮಾಯಣ, ಮಹಾಭಾರತ, ಸಂಸ್ಕೃತ, ಗರುಡ ಮತ್ತು ಬಾಲಿ ಮುಂತಾದ ಹಂಚಿಕೆಯ ಸಂಕೇತಗಳು ಇಂದು ಕೇವಲ ಸಾಂಸ್ಕೃತಿಕ ಕೊಂಡಿಗಳಾಗಿ ಉಳಿದಿಲ್ಲ, ಅವು ಉಭಯ ದೇಶಗಳ ಬಾಂಧವ್ಯದ ಪ್ರಮುಖ ಅಡಿಪಾಯಗಳಾಗಿವೆ. ಭಾರತದ ಸಾಫ್ಟ್ ಪವರ್ ಈಗ ಕೇವಲ ಯೋಗ ಮತ್ತು ಸಂಸ್ಕೃತಿಗೆ ಸೀಮಿತವಾಗಿರದೆ ಶಿಕ್ಷಣ, ಆರೋಗ್ಯ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೂ ವಿಸ್ತರಿಸಿದೆ.
ಭಾರತ ಮತ್ತು ಇಂಡೋನೇಷ್ಯಾದ ಐತಿಹಾಸಿಕ ಒಪ್ಪಂದಗಳು
ಸಂಸ್ಕೃತಿಯ ವಿಶ್ವಾಸವನ್ನು ಬಳಸಿಕೊಂಡು ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಕಡಲ ಭದ್ರತೆಯಲ್ಲಿ ಮಾಡಿಕೊಳ್ಳಲಾದ ಪ್ರಮುಖ ಒಪ್ಪಂದಗಳು ಈ ಕೆಳಗಿನಂತಿವೆ:
1. ರಕ್ಷಣೆ ಮತ್ತು ಕಡಲ ಭದ್ರತೆ
- ಬ್ರಹ್ಮೋಸ್ ಮತ್ತು ಅಸ್ತ್ರ ಕ್ಷಿಪಣಿಗಳು: ಇಂಡೋನೇಷ್ಯಾ ಭಾರತದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಜೊತೆಗೆ, ಭಾರತದ ‘ಆಪರೇಷನ್ ಸಿಂಧೂರ್’ ಯಶಸ್ಸಿನ ನಂತರ ಅಸ್ತ್ರ ಏರ್-ಟು-ಏರ್ ಕ್ಷಿಪಣಿಗಳನ್ನು ಸಹ ಖರೀದಿಸಿದೆ.
- ಸೇನಾ ತರಬೇತಿ: ಇಂಡೋನೇಷ್ಯಾದ ರಕ್ಷಣಾ ಅಧಿಕಾರಿಗಳಿಗೆ ಭಾರತದ ಪ್ರತಿಷ್ಠಿತ ಎನ್‌ಡಿಎ ಮತ್ತು ಡಿಎಸ್‌ಎಸ್‌ಸಿ (ಈಖಖಇ) ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು.
- ಸಬಾಂಗ್ ಬಂದರು ಅಭಿವೃದ್ಧಿ: ಮಲಕ್ಕಾ ಜಲಸಂಧಿಯ ಮುಖಭಾಗದಲ್ಲಿರುವ, ಮತ್ತು ಭಾರತದ ನಿಕೋಬಾರ್ ಬಂದರು ಯೋಜನೆಯಿಂದ ಕೇವಲ 100 ಮೈಲಿ ದೂರದಲ್ಲಿರುವ ಆಯಕಟ್ಟಿನ ಸಬಾಂಗ್ ಬಂದರನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
2. ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಪೂರೈಕೆ ಸರಪಳಿ
- ದುರ್ಲಭ ಖನಿಜಗಳು : ಭಾರತದ, ಮಿಡ್‌ವೆಸ್ಟ್ ಲಿಮಿಟೆಡ್ ಮತ್ತು ಇಂಡೋನೇಷ್ಯಾದ ನಡುವೆ ತ್ರಿಪಕ್ಷೀಯ ಒಪ್ಪಂದವಾಗಿದ್ದು, ಇದು ಇಂಡೋನೇಷ್ಯಾದಲ್ಲಿ ಸ್ಟೀಲ್, ನಿಕೆಲ್ ಮತ್ತು ರೇರ್ ಅರ್ಥ್ ಮ್ಯಾಗ್ನೆಟ್‌ಗಳ ತಯಾರಿಕೆಯಲ್ಲಿ ಭಾರತೀಯ ಹೂಡಿಕೆಗೆ ಉತ್ತೇಜನ ನೀಡುತ್ತದೆ.
- ಬಾಹ್ಯಾಕಾಶ ಸಹಕಾರ: ಉಪಗ್ರಹ ತಂತ್ರಜ್ಞಾನ, ಜಂಟಿ ಸಂಶೋಧನೆ ಮತ್ತು ದೂರಸಂವೇದಿ ದತ್ತಾಂಶ ಹಂಚಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಕೃಷಿ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಗೆ ಸಹಕಾರಿಯಾಗಲಿದೆ.
- ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್: ಭಾರತವು ತನ್ನ ಡಿಜಿಟಲ್ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದೆ. ಇದರ ಅಡಿಯಲ್ಲಿ ಭಾರತದ ಖಿಐ ಮತ್ತು ಇಂಡೋನೇಷ್ಯಾದ ಕ್ಕಿಐಖ ಪಾವತಿ ವ್ಯವಸ್ಥೆಗಳನ್ನು ಪರಸ್ಪರ ಜೋಡಿಸುವ ಪ್ರಕ್ರಿಯೆ ನಡೆಯಲಿದೆ. ಇದು ‘ಸ್ಟಾರ್ಟ್‌ಅಪ್ ಇಂಡಿಯಾ’ ಮಿಷನ್‌ಗೆ ಬೆಂಬಲ ನೀಡುತ್ತದೆ.
ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬ್ರೇಕ್: ತಮಿಳುನಾಡಿನಲ್ಲಿ ಸದ್ಯಕ್ಕಿಲ್ಲ ‘ಸಂಪೂರ್ಣ ಗೋಹತ್ಯೆ ನಿಷೇಧ’
3. ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣ
- ಐಐಎಂ ಬೆಂಗಳೂರು ವಿದೇಶಿ ಕ್ಯಾಂಪಸ್: ಭಾರತದ ಪ್ರಮುಖ ಮ್ಯಾನೇಜ್‌ಮೆಂಟ್ ಶಿಕ್ಷಣ ಬ್ರ್ಯಾಂಡ್ ಅನ್ನು ಆಸಿಯಾನ್ ದೇಶಗಳಿಗೆ ವಿಸ್ತರಿಸುವ ಭಾಗವಾಗಿ, ಬೆಂಗಳೂರು ಐಐಎಂ ತನ್ನ ಮೊದಲ ವಿದೇಶಿ ಕ್ಯಾಂಪಸ್ ಅನ್ನು ಇಂಡೋನೇಷ್ಯಾದ ಸಿಂಘಸಾರಿಯಲ್ಲಿ ತೆರೆಯಲಿದೆ.
- ಚುನಾವಣಾ ತಂತ್ರಜ್ಞಾನ: ವಿಶ್ವದ ಅತಿ ದೊಡ್ಡ ಮತ್ತು ಮೂರನೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾವನ್ನು ಬೆಸೆಯುವಂತೆ, ಇಂಡೋನೇಷ್ಯಾ ತನ್ನದೇ ಆದ ಇವಿಎಂಗಳನ್ನು ಅಭಿವೃದ್ಧಿಪಡಿಸಲು ಭಾರತದ ಚುನಾವಣಾ ಆಯೋಗ ನೆರವು ನೀಡಲಿದೆ.
- ಆರೋಗ್ಯ ಮತ್ತು ಸಾರ್ವಜನಿಕ ವಿತರಣೆ: ಇಂಡೋನೇಷ್ಯಾದ 280 ಮಿಲಿಯನ್ ನಾಗರಿಕರಿಗೆ ಭಾರತದ ಕೈಗೆಟುಕುವ ದರದ ಔಷಧಗಳು ಲಭ್ಯವಾಗಲಿವೆ. ಇದರೊಂದಿಗೆ, ಭಾರತವು ತನ್ನ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾದರಿಯನ್ನು ಇಂಡೋನೇಷ್ಯಾದೊಂದಿಗೆ ಹಂಚಿಕೊಂಡಿದೆ.
- ಆಹಾರ ಭದ್ರತೆ: ಕೃಷಿ ಆಧಾರಿತ ಆರ್ಥಿಕತೆಯನ್ನು ಹೊಂದಿರುವ ಇಂಡೋನೇಷ್ಯಾಕ್ಕೆ ಆಹಾರ ಭದ್ರತೆಯನ್ನು ಉತ್ತೇಜಿಸಲು ಭಾರತವು 100 ಟನ್ ಉತ್ತಮ ಗುಣಮಟ್ಟದ ಗೋಧಿ ಬಿತ್ತನೆ ಬೀಜಗಳನ್ನು ಪೂರೈಸುವುದಾಗಿ ಪ್ರಕಟಿಸಿದೆ.
- ವಿಪತ್ತು ನಿರ್ವಹಣೆ: ಭಾರತ ಮತ್ತು ಇಂಡೋನೇಷ್ಯಾದ ನಡುವೆ ಒಪ್ಪಂದವಾಗಿದ್ದು, ತಂತ್ರಜ್ಞಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಗಳ ಮೂಲಕ ಲಕ್ಷಾಂತರ ಜನರ ಜೀವ ಉಳಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಪ್ರಧಾನಿ ಮೋದಿಯವರ ಮಹಾಸಾಗರ್ ದೃಷ್ಟಿಕೋನದ ಅಡಿಯಲ್ಲಿ ಕೈಗೊಳ್ಳಲಾದ ಈ ಐತಿಹಾಸಿಕ ಭೇಟಿಯು, ಕೇವಲ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣೆ, ಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಗೆ ಹೊಸ ದಾರಿದೀಪವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
