ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರತಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ಚಿತ್ರತಂಡದ ವಾಹನ ಅಪಘಾತಕ್ಕೀಡಾಗಿದ್ದು, ಓರ್ವ ಸದಸ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಚಿತ್ರತಂಡಕ್ಕೆ ವಿಘ್ನ ಎದುರಾದಂತೆ ಆಗಿದೆ. ವ್ಯಕ್ತಿ ಮೃತಪಟ್ಟ ಕಾರಣದಿಂದ ‘ಫೌಜಿ’ (Fauzi) ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
ಹೈದರಾಬಾದ್‌ನ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಗೆ ಚಿತ್ರೀಕರಣಕ್ಕಾಗಿ ತಂಡವು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಬ್ದುಲ್ಲಾಪುರಮೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಸಿಮೆಂಟ್ ಡಿವೈಡರ್‌ಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಚೌಟುಪ್ಪಲ್ ಪೊಲೀಸ್ ಠಾಣಾ ವ್ಯಾಪ್ತಿಯ ತೂಪ್ರಾನ್‌ಪೇಟ್ ಸೇತುವೆಯ ಸಮೀಪ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿ ಆಗಿದೆ.
ಈ ಘಟನೆಯಲ್ಲಿ ಚಿತ್ರತಂಡದ ಓರ್ವ ಸದಸ್ಯ ಮೃತಪಟ್ಟಿದ್ದು, ಅವರ ಗುರುತು ಇನ್ನೂ ಬಹಿರಂಗವಾಗಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಉಳಿದ ಐವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ.
ಈ ದುರದೃಷ್ಟಕರ ಘಟನೆಯ ಬೆನ್ನಲ್ಲೇ ‘ಫೌಜಿ’ ಚಿತ್ರದ ನಿರ್ಮಾಪಕರು ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಮೃತ ಸದಸ್ಯನ ಗೌರವಾರ್ಥವಾಗಿ ಮತ್ತು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತನಿಖೆಗೆ ಚಿತ್ರತಂಡವು ಪೊಲೀಸರೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ‘ಫೌಜಿ’ ಸೆಟ್ನಿಂದ ಪ್ರಭಾಸ್ ಫೋಟೋ ಲೀಕ್: ಅಭಿಮಾನಿಗಳಿಗೆ ಚಿತ್ರತಂಡದ ವಾರ್ನಿಂಗ್
ಹನು ರಾಘವಪುಡಿ ನಿರ್ದೇಶನದ ಈ ಚಿತ್ರವು 1940ರ ದಶಕದ ಹಿನ್ನೆಲೆಯ ಐತಿಹಾಸಿಕ ಕಥೆಯನ್ನು ಹೊಂದಿದ್ದು, ಈಗಾಗಲೇ ಶೇಕಡ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷದ ದಸರಾ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಚಿತ್ರೀಕರಣ ಪ್ರಗತಿಯಲ್ಲಿ ಇರುವಾಗಲೇ ಈ ರೀತಿ ದುರ್ಘಟನೆ ಸಂಭವಿಸಿರುವುದು ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
