Headlines

ಭೀಕರ ಬರದ ಛಾಯೆ: ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ – Kannada News | Karnataka Drought: CM DK Shivakumar Orders Ministers to Tour Districts; Reservoir Inflow Drops to 20 percent

ಬೆಂಗಳೂರು, ಜುಲೈ 3: ಕರ್ನಾಟಕದಲ್ಲಿ (Karnataka) ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಭೀಕ ಬರಗಾಲದ ಛಾಯೆ ಆವರಿಸಿದ್ದು, ಪರಿಸ್ಥಿತಿಯ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ 31 ಜಿಲ್ಲೆಗಳಿಗೂ ಭೇಟಿ ನೀಡಿ ಬರ ಪರಿಸ್ಥಿತಿಯ ಪರಾಮರ್ಶೆ ನಡೆಸುವಂತೆ ಸಂಪುಟದ 13 ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ನಾನು ಕೂಡ ರಾಜ್ಯದ ನಾಲ್ಕೂ ಆಡಳಿತ ವಿಭಾಗಗಳಲ್ಲಿ ಪ್ರವಾಸ ಕೈಗೊಂಡು ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿದ್ದೇನೆ’ ಎಂದು ಸಿಎಂ ಹೇಳಿದ್ದಾರೆ.

ಜಲಾಶಯಗಳಲ್ಲಿ ಶೂನ್ಯ ಒಳಹರಿವು: ರೈತರಿಗೆ ಸಿಎಂ ಕಿವಿಮಾತು

ದೇಶಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ನೀರು ಮತ್ತು ವಿದ್ಯುತ್‌ಗೆ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಮಂತ್ರಿಯವರೇ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದು ಸಿಎಂ ನೆನಪಿಸಿದರು. ಪ್ರಸ್ತುತ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲ್ಮಟ್ಟಿ, ನಾರಾಯಣಪುರ ಮತ್ತು ವಾಣಿವಿಲಾಸ ಸಾಗರ ಜಲಾಶಯಗಳಲ್ಲಿ ಒಳಹರಿವು ಸಂಪೂರ್ಣ ಶೂನ್ಯವಾಗಿದೆ. ಕಾವೇರಿ ಕೊಳ್ಳದಲ್ಲೂ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಕಳೆದ ವರ್ಷ ಹೇಮಾವತಿಯಲ್ಲಿ 88 ಟಿಎಂಸಿ ನೀರಿತ್ತು, ಇಂದು ಅದು 40 ಟಿಎಂಸಿಗೆ ಇಳಿದಿದೆ. ಕೆಆರ್‌ಎಸ್‌ನಲ್ಲಿ ಕಳೆದ ವರ್ಷ 100 ಟಿಎಂಸಿ ಇದ್ದರೆ, ಇಂದು ಕೇವಲ 22 ಟಿಎಂಸಿ ಇದೆ. ಕಬಿನಿಯಲ್ಲಿ ಕಳೆದ ವರ್ಷ 79 ಟಿಎಂಸಿ ಇದ್ದದ್ದು ಇಂದು 26 ಟಿಎಂಸಿಗೆ ಕುಸಿದಿದೆ. ಒಟ್ಟಾರೆಯಾಗಿ ರಾಜ್ಯದ ಜಲಾಶಯಗಳ ಒಳಹರಿವು ಕೇವಲ ಶೇ 20 ರಷ್ಟು ಮಾತ್ರ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರೈತರು ಕೇವಲ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ, ನೀರಿಲ್ಲದಿದ್ದರೆ ಕೃಷಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ಕೊರತೆ ನೀಗಿಸಲು ಸಿದ್ಧತೆ

ಬರಗಾಲದ ಭೀತಿಯ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ತಡೆಗಟ್ಟಲು ಕಲ್ಲಿದ್ದಲು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ದಾಸ್ತಾನು ಮಾಡಿಕೊಳ್ಳಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ತುರ್ತು ಸಂದರ್ಭ ಎದುರಾದರೆ ಬಳಕೆ ಮಾಡಲು ಬೆಂಗಳೂರಿನಲ್ಲಿರುವ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆಗಸ್ಟ್‌ನಲ್ಲಿ 15 ದಿನಗಳ ಮುಂಗಾರು ಅಧಿವೇಶನ

ಸಾಮಾನ್ಯವಾಗಿ ಜುಲೈನಲ್ಲಿ ನಡೆಯಬೇಕಿದ್ದ ಜಂಟಿ ಸದನದ ಮುಂಗಾರು ಅಧಿವೇಶನವನ್ನು ಈ ಬಾರಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕಾರಣದಿಂದಾಗಿ ಆಗಸ್ಟ್‌ಗೆ ಮುಂದೂಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಶಾಸಕರು ಮತ್ತು ಅಧಿಕಾರಿಗಳು ಅರ್ಹ ಮತದಾರರ ಹೆಸರುಗಳನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಯಾರನ್ನೂ ತೊಂದರೆಗೆ ಸಿಲುಕಿಸದೆ, ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ 15 ದಿನಗಳ ಕಾಲ ಮುಂಗಾರು ಅಧಿವೇಶನ ಕರೆಯಲಾಗುವುದು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಫಾರಂಗಳನ್ನು ವಿತರಿಸಬೇಕು, ಯಾವುದೇ ಶಾಸಕರು ಅಥವಾ ರಾಜಕೀಯ ಕಾರ್ಯಕರ್ತರು ಇವುಗಳನ್ನು ಹಂಚುವಂತಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *