ಭೀಮಗಢ ಅಭಯಾರಣ್ಯದಲ್ಲಿರುವ ಕುಗ್ರಾಮImage Credit source: Deccan herald
ಬೆಳಗಾವಿ, ಏಪ್ರಿಲ್ 27: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಹಾಗೂ ಹುಲಿ-ಆನೆಗಳ ಪ್ರಮುಖ ಸಂಚಾರಿ ಪಥವಾಗಿರುವ ಬೆಳಗಾವಿಯ (Belagavi) ಭೀಮಗಢ ವನ್ಯಜೀವಿ ಅಭಯಾರಣ್ಯದಿಂದ ಸ್ವಯಂಪ್ರೇರಿತವಾಗಿ ಹೊರಬರಲು ಅರ್ಜಿ ಸಲ್ಲಿಸಿರುವ 450ಕ್ಕೂ ಹೆಚ್ಚು ಕುಟುಂಬಗಳು ಕಳೆದ ಒಂದು ವರ್ಷದಿಂದ ಸರ್ಕಾರದ ಮುಂದಿನ ಕ್ರಮಕ್ಕಾಗಿ ಕಾಯುತ್ತಿವೆ.
ವಿಳಂಬಕ್ಕೆ ಕಾರಣವೇನು?
ಕಳೆದ ಮೇ ತಿಂಗಳಿನಲ್ಲಿ ತಾಳೇವಾಡಿ ಗ್ರಾಮದ 27 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಮೊದಲ ಕಂತಿನ ಚೆಕ್ ವಿತರಿಸಲಾಗಿತ್ತು. ಆದರೆ, ಉಳಿದ ಕುಟುಂಬಗಳ ಅರ್ಜಿ ಪ್ರಕ್ರಿಯೆ ಇನ್ನೂ ಕುಂಟುತ್ತಾ ಸಾಗಿದೆ. ಅರಣ್ಯ ಇಲಾಖೆಯ ಪ್ರಕಾರ, ಸ್ಥಳಾಂತರಗೊಳ್ಳುವ ಕುಟುಂಬಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಹೊಂದಿಕೆಯಾಗುವ ಸೂಕ್ತ ಭೂಮಿಯನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ.
ಪರಿಹಾರದ ಮೊತ್ತಕ್ಕೆ ಹೆಚ್ಚುವರಿ ಬೇಡಿಕೆ
ಅಭಯಾರಣ್ಯದ ಒಟ್ಟು 13 ಹಳ್ಳಿಗಳ ಪೈಕಿ 9 ಹಳ್ಳಿಗಳ ಜನರು ತಕ್ಷಣ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ. ಆದರೆ, ಪ್ರಸ್ತುತ ನೀಡಲಾಗುತ್ತಿರುವ 15 ಲಕ್ಷ ರೂಪಾಯಿಗಳ ಪರಿಹಾರ ಮೊತ್ತ ಸಾಲುತ್ತಿಲ್ಲ ಎಂಬುದು ಇವರ ವಾದ. ಬದುಕನ್ನು ಕಟ್ಟಿಕೊಳ್ಳಲು ಕೃಷಿ ಭೂಮಿ ಮತ್ತು ಮನೆಯನ್ನು ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಿಗದಿಪಡಿಸಿದ 15 ಲಕ್ಷ ರೂ.ಗಳ ಪ್ಯಾಕೇಜ್‌ನ್ನೇ ಪರಿಗಣಿಸಿದೆ.
ಕಾಡಿನ ಕಠಿಣ ಬದುಕು
ಅಭಯಾರಣ್ಯದ ಒಳಗಿನ ಬದುಕು ಸುಲಭವಲ್ಲ. ತುರ್ತು ಚಿಕಿತ್ಸೆಗೆ ಸುಮಾರು 25 ಕಿ.ಮೀ ದೂರ ಕ್ರಮಿಸಬೇಕು. ಮಳೆಗಾಲದಲ್ಲಂತೂ ಇಲ್ಲಿನ 11 ಹಳ್ಳಿಗಳಲ್ಲಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುವುದರಿಂದ ಓಡಾಟಕ್ಕೆ ಅಡೆತಡೆ ಉಂಟಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕಾಡು ಬಿಟ್ಟು ಕದಲುವುದಿಲ್ಲ ಎಂದು ಪಾಸ್ಟೋಲಿ ಗ್ರಾಮದ ಸುಮಿತ್ರಾ ಗೌಡ ಹೇಳಿದ್ದಾರೆ.
ಕಾನೂನು ತೊಡಕು
ಇನ್ನೊಂದೆಡೆ, ಗವಳಿ ಗ್ರಾಮದಂತಹ ಕೆಲವು ಹಳ್ಳಿಗಳಲ್ಲಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ದೇವತೆಯನ್ನು ಬಿಟ್ಟು ಹೋಗಲಾರೆವು ಎಂದು ಅರ್ಚಕರು ಹೇಳುತ್ತಿದ್ದು, ಸ್ಥಳಾಂತರ ಮಾಡುವ ಬದಲು ಸೇತುವೆಗಳನ್ನು ನಿರ್ಮಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇದರ ನಡುವೆ, ಈ ಸ್ಥಳಾಂತರ ಪ್ರಕ್ರಿಯೆಯು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಯೂ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
