ಭೂಕಂಪ ಪೀಡಿತ ವೆನೆಜುವೆಲಾಗೆ ಭಾರತದ ನೆರವು; ‘ಆಪರೇಷನ್ ಅಮಿಸ್ಟಾಡ್’ ಅಡಿ ವಾಯುಪಡೆಯ 2 ವಿಮಾನ ರವಾನೆ – Kannada News | India sends Medical help to earthquake hit Venezuela under Operation Amistad 2 IAF Aircraft Dispatched

ನವದೆಹಲಿ, ಜೂನ್ 26: ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಕಷ್ಟದಲ್ಲಿರುವ ದೇಶಗಳಿಗೆ ತಕ್ಷಣ ಸ್ಪಂದಿಸುವ ತನ್ನ ಜಾಗತಿಕ ಬದ್ಧತೆಯನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪದಿಂದಾಗಿ ತತ್ತರಿಸಿರುವ ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾಗೆ (Venezuela) ತುರ್ತು ವೈದ್ಯಕೀಯ ಮತ್ತು ರಕ್ಷಣಾ ಸಾಮಗ್ರಿಗಳನ್ನು ತಲುಪಿಸಲು ಭಾರತ ಸರ್ಕಾರವು ‘ಆಪರೇಷನ್ ಅಮಿಸ್ಟಾಡ್’ (Operation Amistad) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಮಿಸ್ಟಾಡ್’ ಎಂದರೆ “ಸ್ನೇಹ” ಎಂದರ್ಥ. ಸಂಕಷ್ಟದ ಸಮಯದಲ್ಲಿ ವೆನೆಜುವೆಲಾ ಜೊತೆಗಿನ ಸ್ನೇಹ ಹಸ್ತವನ್ನು ಚಾಚುವ ಸಂಕೇತವಾಗಿ ಭಾರತ ಈ ಹೆಸರನ್ನು ಇಟ್ಟಿದೆ. ಭಾರತೀಯ ವಾಯುಪಡೆಗೆ ಸೇರಿದ 2 ಬೃಹತ್ ಸರಕು ಸಾಗಣೆ ವಿಮಾನಗಳು (C-17 ಗ್ಲೋಬ್‌ಮಾಸ್ಟರ್) ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಯಿಂದ ವೆನೆಜುವೆಲಾಗೆ ಈಗಾಗಲೇ ರವಾನೆಯಾಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒದಗಿಸಿರುವ ಸುಮಾರು 35 ಟನ್ ಪರಿಹಾರ ಸಾಮಗ್ರಿಗಳು ಮತ್ತು 6 ಟನ್ ವೈದ್ಯಕೀಯ ದಾಸ್ತಾನುಗಳೊಂದಿಗೆ ಭಾರತದ ಮಹತ್ವಾಕಾಂಕ್ಷೆಯ ‘ಆರೋಗ್ಯ ಮೈತ್ರಿ ಯೋಜನೆ’ ಅಡಿಯಲ್ಲಿ ತಯಾರಿಸಲಾದ 2 ಅತ್ಯಾಧುನಿಕ ‘ಭೀಷ್ಮ ಕ್ಯೂಬ್ಸ್’ (ಮೊಬೈಲ್ ಆಸ್ಪತ್ರೆ ಘಟಕಗಳನ್ನು) ಕಳುಹಿಸಲಾಗಿದೆ. ಇದು ಭೂಕಂಪ ಪೀಡಿತ ಸ್ಥಳದಲ್ಲೇ ತುರ್ತು ನಿಗಾ ಘಟಕ (ICU) ಮತ್ತು ಆಪರೇಷನ್ ಥಿಯೇಟರ್ ತರಹದ ಸೌಲಭ್ಯವನ್ನು ಒದಗಿಸುತ್ತದೆ.

ವೈದ್ಯಕೀಯ ಮತ್ತು ತುರ್ತು ಸಾಮಗ್ರಿ ರವಾನೆ:

ಈ ವಿಮಾನಗಳಲ್ಲಿ ಭೂಕಂಪ ಪೀಡಿತ ಪ್ರದೇಶಗಳಿಗೆ ಅಗತ್ಯವಿರುವ ಅತ್ಯಗತ್ಯ ಜೀವ ರಕ್ಷಕ ಔಷಧಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ರಕ್ಷಣಾ ಕಾರ್ಯಕ್ಕೆ ಬೇಕಾಗುವ ಯಂತ್ರೋಪಕರಣಗಳು, ಟೆಂಟ್‌ಗಳು, ಬ್ಲಾಂಕೆಟ್‌ಗಳು ಮತ್ತು ಸಿದ್ಧ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಭಾರತವು ‘ವಸುಧೈವ ಕುಟುಂಬಕಂ’ ಮತ್ತು ‘ಜಾಗತಿಕ ದಕ್ಷಿಣ’ದ ದೇಶಗಳ ನಡುವಿನ ಒಗ್ಗಟ್ಟಿನ ಭಾಗವಾಗಿ ಈ ಮಾನವೀಯ ನೆರವನ್ನು ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಗಳು; 164 ಜನ ಸಾವು, 971 ಜನರಿಗೆ ಗಂಭೀರ ಗಾಯ

ವೆನೆಜುವೆಲಾದಲ್ಲಿ ಕಳೆದ ಒಂದು ಶತಮಾನದಲ್ಲೇ ಮೊದಲ ಬಾರಿಗೆ ಒಂದೇ ನಿಮಿಷದ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಅತ್ಯಂತ ವಿನಾಶಕಾರಿ ಭೂಕಂಪಗಳು ಸಂಭವಿಸಿವೆ. ಇದರ ಬೆನ್ನಲ್ಲೇ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ದೇಶಾದ್ಯಂತ ಭಾರಿ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಅಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 235ಕ್ಕೆ ತಲುಪಿದ್ದು, 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಹತ್ತಾರು ಸಾವಿರ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಟರ್ಕಿಯ ಭೂಕಂಪದ ಸಮಯದಲ್ಲಿ ಕೂಡ ‘ಆಪರೇಷನ್ ದೋಸ್ತ್’ ಮತ್ತು ನೇಪಾಳದ ಭೂಕಂಪದ ವೇಳೆ ‘ಆಪರೇಷನ್ ಮೈತ್ರಿ’ ಮೂಲಕ ಜಾಗತಿಕ ಗಮನ ಸೆಳೆದಿದ್ದ ಭಾರತ, ಈಗ ‘ಆಪರೇಷನ್ ಅಮಿಸ್ಟಾಡ್’ ಮೂಲಕ ವೆನೆಜುವೆಲಾಕ್ಕೆ ನೆರವಾಗುತ್ತಿದೆ.

ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ ಮತ್ತು ಲಾ ಗುವೈರಾ ಪ್ರದೇಶಗಳು ಭೂಕಂಪದಿಂದ ತೀವ್ರವಾಗಿ ಹಾನಿಗೊಳಗಾಗಿದ್ದು, ಸ್ಥಳೀಯ ಜನರಲ್ಲಿ ಭೀತಿ ಆವರಿಸಿದೆ. ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರಾದ ಡೆಲ್ಸಿ ರೊಡ್ರಿಗಸ್ ಅವರು ದೇಶದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಪುನರ್ನಿರ್ಮಾಣ ಕಾರ್ಯಗಳಿಗಾಗಿ ಆರಂಭಿಕವಾಗಿ 200 ಮಿಲಿಯನ್ ಯುಎಸ್ ಡಾಲರ್ ನಿಧಿಯನ್ನು ಘೋಷಿಸಿದ್ದಾರೆ. ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಮೆಕ್ಸಿಕೋದಂತಹ ದೇಶಗಳೂ ಸಹ ವೆನೆಜುವೆಲಾಗೆ ನೆರವಿನ ಹಸ್ತ ಚಾಚಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *