ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್ ಭೂತ: ಕೇರಳದ ವಿದ್ಯಾರ್ಥಿಗಳಿಗೆ ಟಾರ್ಚರ್, ಇಬ್ಬರಿಗೆ ಥಳಿತ – Kannada News | Mangaluru Ragging Case: Junior Students From Kerala Assaulted Over Black Shoes, Six Seniors Detained

ಮಂಗಳೂರು, ಆಗಸ್ಟ್ 6: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮಂಗಳೂರಿನಲ್ಲಿ ರ್ಯಾಗಿಂಗ್ ಪ್ರಕರಣ ಮತ್ತೆ ಸದ್ದು ಮಾಡಿದೆ. ಕಪ್ಪು ಶೂ ಧರಿಸಿಕೊಂಡು ಬಂದ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಗಳು ಇಬ್ಬರು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ರ್ಯಾಗಿಂಗ್‌ನ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

ಕಪ್ಪು ಶೂ ವಿಚಾರಕ್ಕೆ ಜೂನಿಯರ್‌ಗಳ ಮೇಲೆ ಹಲ್ಲೆ

ಎಜುಕೇಶನ್ ಹಬ್ ಮಂಗಳೂರಿನಲ್ಲಿ ರ್ಯಾಗಿಂಗ್ ಎಂಬ ಪಿಡುಗು ಮತ್ತೆ ಸದ್ದು ಮಾಡಿದೆ. ಕೇವಲ ಕಪ್ಪು ಶೂ ಧರಿಸಿಕೊಂಡು ಬಂದ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಕಾಲೇಜು ಪರಿಸರದಲ್ಲಿ ಆತಂಕ ಮೂಡಿಸಿದೆ.

ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಕೇರಳದ ಇಬ್ಬರು ವಿದ್ಯಾರ್ಥಿಗಳು ನಗರದ ಗುಜ್ಜರಕೆರೆ ಎಂಬಲ್ಲಿ ವಿಹರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಕಪ್ಪು ಶೂ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಗಳ ತೆಗೆದಿದ್ದಾರೆ ಎನ್ನಲಾಗಿದೆ.

ಬಳಿಕ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ಕುತ್ತಿಗೆ ಭಾಗಕ್ಕೂ ಮನಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದರ್ಶ್ ಮತ್ತು ಜಾಸೀನ್ ಖಾದರ್ ಎಂಬವರು ಹಲ್ಲೆಗೊಳಗಾದ ವಿದ್ಯಾರ್ಥಿಗಳಾಗಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಮಂದಿ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪಾಂಡೇಶ್ವರ ಠಾಣೆ ಪೊಲೀಸರು ಕಾಲೇಜಿಗೆ ತೆರಳಿ, ಹಲ್ಲೆ ನಡೆಸಿದ ಆರು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ರ್ಯಾಗಿಂಗ್‌ನ ಭಯಾನಕತೆಯನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು

ರ್ಯಾಗಿಂಗ್‌ನ ಭಯಾನಕತೆಯನ್ನು ಗಾಯಾಳು ವಿದ್ಯಾರ್ಥಿಗಳು ಬಿಚ್ಚಿಟ್ಟಿದ್ದಾರೆ. ಕೆಲವು ಹಿರಿಯ ವಿದ್ಯಾರ್ಥಿಗಳು ತಮ್ಮ ಖಾಸಗಿ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಜೂನಿಯರ್ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳನ್ನು ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ಕೂರಿಸುವುದು, ಬಾಯಿಯಿಂದ ಗಾಳಿ ಊದಿ ಎಲ್‌ಇಡಿ ಬಲ್ಬ್ ಆರಿಸಲು ಹಾಗೂ ಫ್ಯಾನ್ ತಿರುಗಿಸಲು ಒತ್ತಾಯಿಸುವಂತಹ ಅಮಾನವೀಯ ಕೃತ್ಯಗಳನ್ನು ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕೇರಳದ ವಿದ್ಯಾರ್ಥಿಗಳೇ ಕೇರಳದ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ನಡೆಸುತ್ತಿದ್ದು, ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಕ್ರಮಕ್ಕೆ ಶಾಸಕ ಭರತ್ ಶೆಟ್ಟಿ ಆಗ್ರಹ

ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಪದೇಪದೇ ರ್ಯಾಗಿಂಗ್ ಪ್ರಕರಣಗಳಲ್ಲಿ ಶಾಮೀಲಾಗುತ್ತಿದ್ದಾರೆ ಎಂದು ಆರೋಪಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿ ಕಾಲೇಜಿನಲ್ಲಿರುವ ಆ್ಯಂಟಿ ರ್ಯಾಗಿಂಗ್ ಕಮಿಟಿಗಳು ನಿಷ್ಕ್ರಿಯವಾಗುತ್ತಿವೆ ಎಂದು ಆರೋಪಿಸಿರುವ ಅವರು, ಪೊಲೀಸರು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗೆ ರ್ಯಾಗಿಂಗ್ ವಿರುದ್ಧ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಮುಹೂರ್ತ ಫಿಕ್ಸ್, ಆ ಘಾಟಿನಲ್ಲಿ ಹೋಗುವುದೇ ಮಜಾ

ಮಂಗಳೂರಿನಲ್ಲಿ ರ್ಯಾಗಿಂಗ್ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಡಿವಾಣ ಹಾಕಬೇಕಿದೆ. ದೂರದೂರಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬುವ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *