ಮಂಗಳೂರು, ಮೇ 01: ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Cooker Bomb Blast Case) ಅಪರಾಧಿ ಮೊಹಮ್ಮದ್ ಶಾರೀಕ್‌ಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಆದರೆ, ಕೇವಲ 10 ವರ್ಷಗಳ ಶಿಕ್ಷೆ ಸಾಕಾಗುವುದಿಲ್ಲ ಎಂದು ಎನ್‌ಐಎ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಇನ್ನು ಶಾರೀಕ್ ಬಾಂಬರ್ ಆಗಲು ಪೊಲೀಸ್ ನಿರ್ಲಕ್ಷವು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜೀವಾವಧಿ ಶಿಕ್ಷೆ ಏಕೆ?
ಅದು 2022 ನವೆಂಬರ್ 19. ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಮೊಹಮ್ಮದ್ ಶಾರೀಕ್ ತೆಗೆದುಕೊಂಡು ಹೋಗುತ್ತಿದ್ದ ಬಾಂಬ್ ಸ್ಫೋಟಗೊಂಡಿತ್ತು. ಬಳಿಕ ಆತ ಅಂದರ್ ಆಗಿದ್ದ. ಎನ್ಐಎ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಸಜೆ ವಿಧಿಸಿದೆ. ಇನ್ನು 6 ವರ್ಷ ಶಿಕ್ಷೆ ಮಾತ್ರ ಬಾಕಿ ಇದ್ದು ಬಿಡುಗಡೆಯಾಗುವ ವೇಳೆಗೆ ಸುಮಾರು 33 ವರ್ಷ ವಯಸ್ಸಾಗಿರುತ್ತದೆ. ಆ ವಯಸ್ಸಿನಲ್ಲಿ ಆತ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದರೆ, ಭಯೋತ್ಪಾದಕ ಸಂಘಟನೆಗಳು ಆತನನ್ನು ಸಂಪರ್ಕಿಸಿ ಮತ್ತೆ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ತನಿಖೆಯ ವೇಳೆ ಆತ ಈಗಾಗಲೇ ಹಲವು ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದ ಎಂಬುದು ಬಹಿರಂಗವಾಗಿದೆ. ಹೀಗಾಗಿ, ಸಮಾಜದ ಹಿತದೃಷ್ಟಿಯಿಂದ ಆತನಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಹೈಕೋರ್ಟ್ಗೆ ಎನ್ಐಎ ಮನವಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಪೊಲೀಸ್ ನಿರ್ಲಕ್ಷ್ಯವೇ ಅನಾಹುತಕ್ಕೆ ಮುನ್ನುಡಿಯಾಯಿತೇ?
ಇನ್ನು ಶಾರೀಕ್ ತನ್ನ ಸಹಚರ ಮಾಜ್ ಮುನೀರ್ ಜೊತೆ 2020ರ ನವೆಂಬರ್ನಲ್ಲಿ ಉಗ್ರ ಪರ ಬರಹವನ್ನು ಮಂಗಳೂರಿನ ಎರಡು ಗೋಡೆಗಳಲ್ಲಿ ಬರೆದಿದ್ದ. ಆ ಕೇಸ್ನಲ್ಲಿ ಇವರಿಬ್ಬರು ಸೇರಿ ಮೂವರ ಬಂಧನವಾಗಿತ್ತು. ಆದರೆ ಪೊಲೀಸ್ ನಿರ್ಲಕ್ಷತನದಿಂದ ಆ ಕೇಸ್ ಕೋರ್ಟ್ನಲ್ಲಿ ಹಳ್ಳಹಿಡಿತ್ತು.
ಮಂಗಳೂರು ಬಾಂಬ್ ಸ್ಫೋಟ ತಪ್ಪಿಸಬಹುದಿತ್ತು?
ಸಾಕ್ಷಿದಾರರು ಮತ್ತು ಪಂಚರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಆಳವಾದ ತನಿಖೆ ನಡೆಸದೆ ಆತುರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪೊಲೀಸರ ಈ ತನಿಖಾ ವೈಫಲ್ಯದಿಂದ ಆರೋಪಿಗಳಿಗೆ ಬೇಗ ಜಾಮೀನು ಸಿಕ್ಕಿತ್ತು. ಬಿಡುಗಡೆ ಬಳಿಕ ಶಾರೀಕ್ ಮತ್ತು ಮಾಜ್ನಿಂದ ಶಿವಮೊಗ್ಗದ ತಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲಾಗಿತ್ತು. ಬಳಿಕ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಗೋಡೆ ಬರಹ ಕೇಸ್ ತನಿಖೆಯನ್ನು ಸಿಬಿಐ ಅಥವಾ ಎನ್ಐಎಗೆ ವಹಿಸಿದ್ದರೆ ಅಥವಾ ಸರಿಯಾಗಿ ತನಿಖೆ ಮಾಡಿದ್ದರೆ ಮಂಗಳೂರು ಬಾಂಬ್ ಸ್ಫೋಟವನ್ನು ತಪ್ಪಿಸಬಹುದಾದ ಸಾಧ್ಯತೆಯಿತ್ತು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ
ಕೆಲ ಮೂಲಗಳ ಪ್ರಕಾರ ಅಂದಿನ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಈ ಕೇಸ್ ಹಳ್ಳ ಹಿಡಿಸಲು ಉಗ್ರರಿಂದ ಲಂಚ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಕೇಸ್ ರಿ ಓಪನ್ ಆಗಿ ಎನ್ಐಎಗೆ ಹೋದರೆ ಸತ್ಯಾಸತ್ಯತೆಗಳು ಹೊರಬೀಳಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
