ಮಂಗಳೂರು, (ಆಗಸ್ಟ್ 06): ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್ ಡಾ.ವಹೀದಾ ಸುಲ್ತಾನಾ (70) ನಿಧನರಾಗಿದ್ದಾರೆ. ಮೈಸೂರು ಕಲ್ಯಾಣಗಿರಿ ನಿವಾಸಿಯಾಗಿರುವ ಡಾ.ವಹೀದಾ ಸುಲ್ತಾನಾ ಅವರಿಗೆ ಇಂದು (ಆಗಸ್ಟ್ 06) ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಸುಮಾರು 3 ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದು, ವಿಭಾಗ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು. ಅವರು ಪತಿ, ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ(ಆಗಸ್ಟ್ 07) ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಂಗಳೂರು ವಿವಿ ಮಹಿಳಾ ಹಾಸ್ಟೆಲ್ ವಾರ್ಡನ್ ಆಗಿ, ಅಲ್ಪಸಂಖ್ಯಾತರು, ಇತರ ಒಬಿಸಿ ವಿದ್ಯಾರ್ಥಿಗಳ ಐಎಎಸ್ ಕೆಎಎಸ್ ಕೋಚಿಂಗ್ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದರು. ಮಾಧ್ಯಮ, ಆರೋಗ್ಯ, ತಂತ್ರಜ್ಞಾನ, ಮಹಿಳಾ ವಿಚಾರಗಳು ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಲೇಖನಗಳನ್ನು ಬರೆದಿರುವುದಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಿದ್ದಾರೆ.
ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಹಾಂಗ್ ಕಾಂಗ್ ಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಾರ್ಪೊರೇಟ್ ಕಮ್ಯುನಿಕೇಶನ್ಸ್, ಮಹಿಳೆ ಮತ್ತು ಮೀಡಿಯಾ, ಆರೋಗ್ಯ ಸಂವಹನ ಮತ್ತು ಮಹಿಳೆ ಇತ್ಯಾದಿ ವಿಚಾರಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದರು. ಏಷ್ಯನ್ ಕಾಂಗ್ರೆಸ್ ಫಾರ್ ಮೀಡಿಯಾ ಆ್ಯಂಡ್ ಕಮ್ಯುನಿಕೇಶನ್ ಇದರ ರಾಷ್ಟ್ರೀಯ ಸಮಿತಿಯ ಉಪ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರ ನಿಧನಕ್ಕೆ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮಾಮ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
