ಶಿವಮೊಗ್ಗ, (ಜುಲೈ 07): ಮಳೆಗಾಲ ಶುರುವಾಯ್ತು ಅಂದ್ರೆ ಸಾಕು ಕರ್ನಾಟಕದ “ಚಿರಾಪುಂಜಿ” ಎಂಬ ಪ್ರಸಿದ್ಧಿ ಪಡೆದುಕೊಂಡಿರುವ ಆಗುಂಬೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಹೌದು…. ಹಚ್ಚ ಹಸಿರಿನಿಂದ ಕೂಡಿದ ಬೆಟ್ಟ ಗುಡ್ಡಗಳು, ಈ ಆಗುಂಬೆ ಘಾಟಿನಲ್ಲಿ ಅಲ್ಲಿಲ್ಲಿ ಝುಳು ಝುಳು’ ಎಂದು ಹರಿಯುವ ಝರಿಗಳೊಂದಿಗೆ ಆಗುಂಬೆಯು ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ತಾಣವಾಗಿದ್ದು, ವರ್ಷಪೂರ್ತಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈಗ ಹೇಳಿ ಕೇಳಿ ಮಳೆಗಾಲ ಆರಂಭವಾಗಿದ್ದು, ಮಳೆಗಾಲದಲ್ಲಿ ಈ ಪ್ರದೇಶವು ಸಂಪೂರ್ಣ ಹಸಿರು ಹೊದಿಕೆಯನ್ನು ಧರಿಸಿ ಸ್ವರ್ಗದಂತೆಯೇ ಕಾಣುತ್ತಿದೆ. ಈ ಅದ್ಭತ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗುಂಬೆಗೆ ಹರಿದುಬರುತ್ತಿದೆ.
