ಕೆಆರ್ಎಸ್ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆImage Credit source: tv9
ಮಂಡ್ಯ, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವ ಆದೇಶದ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡಿದ್ದು, ಬಿಜೆಪಿ ನಾಯಕರು ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಈ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮೂರುವರೆ ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿದ ನಂತರ ಮಂಡ್ಯದಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಆದೇಶದ ವಿರುದ್ಧ ಧ್ವನಿ ಎತ್ತಿರುವ ಬಿಜೆಪಿ ನಾಯಕರು, ಇಂದು ಬೆಳಗ್ಗೆ 11 ಗಂಟೆಗೆ ಕೆಆರ್ಎಸ್ ಜಲಾಶಯದ ಬಳಿ ಪ್ರತಿಭಟನೆ ಆರಂಭಿಸಿ, ನಂತರ ಅಣೆಕಟ್ಟಿಗೆ ಮುತ್ತಿಗೆ ಹಾಕಲಿದ್ದಾರೆ.
ಮಂಡ್ಯದಾದ್ಯಂತ ಪೊಲೀಸ್ ಸರ್ಪಗಾವಲು
ಅಹಿತಕರ ಘಟನೆಗಳನ್ನು ತಡೆಯಲು ಅಧಿಕಾರಿಗಳು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಆರ್ಎಸ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್‌ಪಿ, ಒಂಬತ್ತು ಡಿವೈಎಸ್‌ಪಿ, ಇಪ್ಪತ್ತೇಳು ಇನ್ಸ್‌ಪೆಕ್ಟರ್‌ಗಳು, ನಲವತ್ತೈದು ಪಿಎಸ್‌ಐ ಮತ್ತು ಎಪ್ಪತ್ತೆಂಟು ಎಎಸ್‌ಐಗಳನ್ನು ಒಳಗೊಂಡಂತೆ ಭಾರಿ ಸಂಖ್ಯೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಮಾಹಿತಿ ನೀಡಿದ್ದಾರೆ.
ಬೃಂದಾವನ ಉದ್ಯಾನವನಕ್ಕೆ ಸಾರ್ವಜನಿಕರಿಗಿಲ್ಲ ಎಂಟ್ರಿ
ಜಲಾಶಯದ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಆರ್ಎಸ್ನ ಬೃಂದಾವನ ಉದ್ಯಾನವನಕ್ಕೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ಬಿಡಲು ವಿರೋಧ: ಮಂಡ್ಯದಲ್ಲಿ ರೈತರ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು
ಮಂಡ್ಯ ಜಿಲ್ಲಾದ್ಯಂತ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಬಿಜೆಪಿ ನಾಯಕರಲ್ಲದೆ, ರೈತ ಸಂಘಟನೆಗಳು ಮತ್ತು ಇತರ ವಿವಿಧ ಸಂಘಟನೆಗಳು ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಹೋರಾಟವನ್ನು ಮುಂದುವರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಯಾವುದೇ ಸಂಘರ್ಷಗಳಿಗೆ ಅವಕಾಶ ನೀಡದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಜಿಲ್ಲೆಯಾದ್ಯಂತ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಶೋಭಾರಾಣಿ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
