ಬೆಂಗಳೂರು, ಆ.13: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಮಂಡ್ಯದ ಪಾಂಡವಪುರದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪಾಂಡವಪುರ ಬಸ್ ನಿಲ್ದಾಣದ ಸರ್ಕಲ್ ಬಳಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದರು. ಅವರ ಕರೆಗೆ ಓಗೊಟ್ಟಿರುವ ಮಂಡ್ಯದ ವಿದ್ಯಾರ್ಥಿಗಳು, ಕಾವೇರಿ ನೀರಿಗಾಗಿ ರೈತರ ಹೋರಾಟಕ್ಕೆ ಸಂಪೂರ್ಣವಾಗಿ ಕೈಜೋಡಿಸಿದ್ದಾರೆ. ಮಂಡ್ಯ ಭಾಗದ ರೈತರಿಗೆ ಅವರ ಬೆಳೆಗೆ ನೀರು ಬಿಡದೆ, ಪ್ರಾಧಿಕಾರದ ಆದೇಶ ಪಾಲಿಸಿ ಪಕ್ಕದ ರಾಜ್ಯಕ್ಕೆ ನೀರು ಹರಿಬಿಡುತ್ತಿರುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನಮ್ಮ ರೈತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯ ಮಾತ್ರವಲ್ಲದೆ, ಬೆಳಗಾವಿ ಮತ್ತು ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಾವೇರಿ ಹೋರಾಟದ ಕಾವು ಹೆಚ್ಚಿದೆ. ಬೆಳಗಾವಿಯಲ್ಲಿ ಉರುಳು ಸೇವೆ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರೆ, ಮೈಸೂರಿನಲ್ಲಿ “ಬಾರ್ಕೋಲ್ ಚಳುವಳಿ” ಮೂಲಕ ರೈತರು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್ ದೊರೆಯುತ್ತಿದ್ದು, ಯುವಜನತೆಯ ಸಕ್ರಿಯ ಭಾಗವಹಿಸುವಿಕೆ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
