ಮಂಡ್ಯ, ಜುಲೈ 4: ಮಂಡ್ಯ ಬಳಿ ನಡೆದ ಟ್ರಕ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ, ಪ್ರಭಾವಿ ಪುತ್ರ ರೋಹನ್ ಗೌಡನಿಗೆ ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನಗಳು ವ್ಯಾಪಕವಾಗಿದ್ದು, ಆರೋಪಗಳೂ ವ್ಯಕ್ತವಾಗಿವೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಪ್ರಮುಖ ಸೆಕ್ಷನ್‌ಗಳನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಎಸ್‌ಪಿ ಮತ್ತು ಆರೋಪಿ ರೋಹನ್ ಕುಟುಂಬದ ನಡುವಿನ ಆತ್ಮೀಯತೆ ಕಾರಣ ಎನ್ನಲಾಗಿದೆ. ಆರೋಪಿ ರೋಹನ್ ಗೌಡ ಮಂಡ್ಯ ಎಸ್‌ಪಿ ಶೋಭಾರಾಣಿ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರು. ಅಲ್ಲದೆ, ಮಂಡ್ಯಕ್ಕೆ ವರ್ಗಾವಣೆಯಾದಾಗ ರೋಹನ್ ಅವರೇ ಶೋಭಾರಾಣಿಗೆ ಅದ್ದೂರಿ ಸ್ವಾಗತ ಕೋರಿ, ಬಳ್ಳಾರಿಯಿಂದ ತಮ್ಮ ಕಾರಿನಲ್ಲಿ ಕರೆತಂದಿದ್ದರು. ಈ ಆಪ್ತ ಸಂಬಂಧವೇ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿವೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರೂ, ವೈದ್ಯಕೀಯ ತಪಾಸಣೆಗೆ ಒಂದು ದಿನ ವಿಳಂಬ ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಗುಂಡಿನ ದಾಳಿಯನ್ನು ‘ಫನ್ ಗೋಸ್ಕರ’ ಮಾಡಲಾಗಿದೆ ಎಂದು ಎಸ್‌ಪಿ ಹೇಳಿರುವುದು ಮತ್ತು ಏರ್‌ಗನ್ ವಶಕ್ಕೆ ಪಡೆಯಲಾಗಿದೆ ಎಂದು ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಘೋಷಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಸ್‌ಪಿ ಶೋಭಾರಾಣಿ ಕರ್ತವ್ಯವನ್ನೇ ಮರೆತು ಪ್ರಭಾವಿ ಪುತ್ರನ ಬೆನ್ನಿಗೆ ನಿಂತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಡ್ಯ ಟ್ರಕ್ ಮೇಲಿನ ಗುಂಡಿನ ದಾಳಿ ಪ್ರಕರಣದ ಮತ್ತಷ್ಟು ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
