ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಮೊಬೈಲ್, ಟಿವಿ, ಟ್ಯಾಬ್ಲೆಟ್‌ಗಳ ಅತಿಯಾದ ಬಳಕೆ, ಆನ್‌ಲೈನ್ ತರಗತಿಗಳು, ಓದಿನ ಒತ್ತಡ ಹಾಗೂ ಮಲಗುವ ಸಮಯದಲ್ಲಿ ಬದಲಾವಣೆಯಿಂದ ಮಕ್ಕಳು ಸರಿಯಾಗಿ ಮಾಡುವುದಿಲ್ಲ. ಆರಂಭದಲ್ಲಿ ಇದು ಸಾಮಾನ್ಯ ಸಮಸ್ಯೆಯಂತೆ ಕಂಡರೂ, ದೀರ್ಘಕಾಲ ನಿದ್ರೆಯ ಕೊರತೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಕ್ಕಳ ಸಮರ್ಪಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಎಷ್ಟು ಮುಖ್ಯವೋ, ಉತ್ತಮ ಗುಣಮಟ್ಟದ ನಿದ್ರೆಯೂ ಅಷ್ಟೇ ಅಗತ್ಯ. ಸಮರ್ಪಕ ನಿದ್ರೆ ದೇಹಕ್ಕೆ ವಿಶ್ರಾಂತಿ ನೀಡುವುದಲ್ಲದೆ, ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ, ಕಲಿಕೆಯ ಸಾಮರ್ಥ್ಯ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಎಷ್ಟು ನಿದ್ರೆ ಬೇಕು?
ಅಮೆರಿಕದ Centers for Disease Control and Prevention (CDC) ಮಾರ್ಗಸೂಚಿಗಳ ಪ್ರಕಾರ:
- 0–3 ತಿಂಗಳು: 14–17 ಗಂಟೆಗಳು
- 4–12 ತಿಂಗಳು: 12–16 ಗಂಟೆಗಳು
- 1–2 ವರ್ಷ: 11–14 ಗಂಟೆಗಳು
- 3–5 ವರ್ಷ: 10–13 ಗಂಟೆಗಳು
- 6–12 ವರ್ಷ: 9–12 ಗಂಟೆಗಳು
- 13–18 ವರ್ಷ: 8–10 ಗಂಟೆಗಳು
ವಯಸ್ಸಿಗೆ ಅನುಗುಣವಾಗಿ ಅಗತ್ಯವಿರುವಷ್ಟು ನಿದ್ರೆ ಪಡೆಯದಿದ್ದರೆ ಮಕ್ಕಳ ಆರೋಗ್ಯ, ಓದು, ಆಟ ಹಾಗೂ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀಳಬಹುದು.
ನಿದ್ರೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳು
- ಮಕ್ಕಳಲ್ಲಿ ನಿದ್ರೆ ಕಡಿಮೆಯಾದರೆ ದಣಿವು ಮತ್ತು ಆಲಸ್ಯ
- ಕಿರಿಕಿರಿ ಮತ್ತು ಕೋಪ ಹೆಚ್ಚಾಗುವುದು
- ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುವುದು
- ನೆನಪಿನ ಶಕ್ತಿ ಕುಗ್ಗುವುದು
- ರೋಗನಿರೋಧಕ ಶಕ್ತಿ ದುರ್ಬಲವಾಗುವುದು
- ಬೊಜ್ಜಿನ ಅಪಾಯ ಹೆಚ್ಚಾಗುವುದು
- ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ
ಇದನ್ನೂ ಓದಿ: ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ ಒಂದು ತಪ್ಪು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳಬಹುದು
ಮಕ್ಕಳ ಸ್ಲೀಪ್ ರೂಟೀನ್ ಉತ್ತಮವಾಗಿಸಲು ಈ ಕ್ರಮಗಳನ್ನು ಅನುಸರಿಸಿ
- ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳುವ ಅಭ್ಯಾಸವನ್ನು ಬೆಳೆಸಿರಿ.
- ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್, ಟಿವಿ ಹಾಗೂ ಟ್ಯಾಬ್ಲೆಟ್ ಬಳಕೆ ನಿಲ್ಲಿಸಿ.
- ಮಲಗುವ ಕೋಣೆ ಶಾಂತವಾಗಿ, ತಂಪಾಗಿರಲಿ.
- ಪ್ರತಿದಿನ ಹೊರಾಂಗಣ ಆಟ ಹಾಗೂ ದೈಹಿಕ ಚಟುವಟಿಕೆಗಳಿಗೆ ಸಮಯ ನೀಡಿ.
- ರಾತ್ರಿ ಹೆಚ್ಚು ಸಕ್ಕರೆ ಅಥವಾ ಹೊಟ್ಟೆ ಬಿರಿಯುವಷ್ಟು ಆಹಾರ ನೀಡುವುದನ್ನು ತಪ್ಪಿಸಿ.
- ಮಲಗುವ ಮೊದಲು ಕಥೆ ಹೇಳುವುದು ಅಥವಾ ಮೃದುವಾದ ಸಂಗೀತ ಕೇಳಿಸುವುದು ಮಕ್ಕಳಿಗೆ ವಿಶ್ರಾಂತಿ ನೀಡುತ್ತದೆ.
- ಸಂಜೆ ವೇಳೆಯ ನಂತರ ಚಾಕೊಲೇಟ್, ಕೋಲ್ಡ್ ಡ್ರಿಂಕ್ಸ್ ಹಾಗೂ ಕ್ಯಾಫಿನ್ ಇರುವ ಆಹಾರಗಳನ್ನು ಕಡಿಮೆ ಮಾಡಿ.
ಮಲಗುವ ಮೊದಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ:
- ಬಿಸಿ ನೀರಿನಲ್ಲಿ ಸ್ನಾನ
- ಪುಸ್ತಕ ಓದುವುದು
- ಆಳವಾದ ಉಸಿರಾಟದ ಅಭ್ಯಾಸ
- ಕುಟುಂಬದೊಂದಿಗೆ ಸಮಯ ಕಳೆಯುವುದು
ಈ ಅಭ್ಯಾಸಗಳನ್ನು ತಪ್ಪಿಸಿ:
- ಹಾಸಿಗೆಯಲ್ಲೇ ಮೊಬೈಲ್ ಬಳಸುವುದು
- ತಡರಾತ್ರಿವರೆಗೆ ವಿಡಿಯೋ ಗೇಮ್ ಆಡುವುದು
- ರಾತ್ರಿ ತಡವಾಗಿ ಊಟ ಮಾಡುವುದು
- ವಾರಾಂತ್ಯದಲ್ಲೂ ತಡವಾಗಿ ಮಲಗುವುದು
ಸೂಚನೆ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಮಗುವಿಗೆ ದೀರ್ಘಕಾಲದ ನಿದ್ರೆಯ ಸಮಸ್ಯೆ, ಉಸಿರಾಟದ ತೊಂದರೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಮಕ್ಕಳ ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
