ಮಕ್ಕಳ ಬಾಲ್ಯವು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ಹಂತವಾಗಿರುವುದರಿಂದ ಪೋಷಕರು ಅವರ ಪಾಲನೆ, ಪೋಷಣೆ ಮಾಡುವಾಗ ಎಷ್ಟು ಜಾಗೃತಿ ವಹಿಸಿದರೂ ಸಾಲುವುದಿಲ್ಲ. ಇಂತಹ ವಯಸ್ಸಿನಲ್ಲಿ ಮಕ್ಕಳು ತಮ್ಮ ಭಯ, ಒತ್ತಡ (Stress) ಅಥವಾ ದುಃಖವನ್ನು ಸ್ಪಷ್ಟವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ, ಅದನ್ನು ಕೋಪ, ಬೇಸರ ಅಥವಾ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ವ್ಯಕ್ತಪಡಿಸಬಹುದು. ಆದ್ದರಿಂದ ಮಕ್ಕಳ ಕೋಪವನ್ನು ಕೇವಲ ಹಠ ಎಂದು ನಿರ್ಲಕ್ಷ್ಯ ಮಾಡುವ ಬದಲು ಅವರ ಉದ್ದೇಶವೇನು, ಯಾಕೆ ಈ ರೀತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮಕ್ಕಳಲ್ಲಿ ಕಂಡುಬರುವ ಯಾವ ಲಕ್ಷಣವನ್ನು ನಿರ್ಲಕ್ಷಿಸಬಾರದು ಮತ್ತು ಏಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಗಮನಿಸಬೇಕಾದ 6 ಪ್ರಮುಖ ಲಕ್ಷಣಗಳು;
ನಿರಂತರ ದುಃಖ ಅಥವಾ ಆಸಕ್ತಿ ಕಳೆದುಕೊಳ್ಳುವುದು: ಹಿಂದೆ ಇಷ್ಟಪಟ್ಟ ಆಟ, ಚಟುವಟಿಕೆಗಳ ಮೇಲೆ ಆಸಕ್ತಿ ಕಡಿಮೆಯಾಗುವುದು ಅಥವಾ ಸದಾ ಬೇಸರದಿಂದ ಇರುವುದು ಮಾನಸಿಕ ಒತ್ತಡದ ಸೂಚನೆಯಾಗಿರಬಹುದು.
ಪದೇಪದೇ ತಲೆನೋವು ಅಥವಾ ಹೊಟ್ಟೆನೋವು: ಯಾವುದೇ ದೈಹಿಕ ಕಾರಣವಿಲ್ಲದೆ ಆಗಾಗ ತಲೆನೋವು ಅಥವಾ ಹೊಟ್ಟೆನೋವಿನ ದೂರು ನೀಡುವುದು ಭಾವನಾತ್ಮಕ ಒತ್ತಡದ ಸಂಕೇತವಾಗಿರಬಹುದು.
ಅತಿಯಾದ ಕಿರಿಕಿರಿ: ಸಣ್ಣ ವಿಷಯಕ್ಕೂ ಬೇಸರಪಡುವುದು, ಕೋಪಗೊಳ್ಳುವುದು ಅಥವಾ ಅಸಹನೆ ತೋರಿಸುವುದು ಒಳಗಿರುವ ಮಾನಸಿಕ ಅಶಾಂತಿಯನ್ನು ಸೂಚಿಸುತ್ತದೆ.
ಇದನ್ನೂ ಓದಿ: ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ?
ಭಾವನಾತ್ಮಕ ಬದಲಾವಣೆಗಳು: ಒಂದು ಕ್ಷಣ ಸಂತೋಷವಾಗಿದ್ದು, ಮತ್ತೊಂದು ಕ್ಷಣಕ್ಕೆ ದುಃಖ ಅಥವಾ ಕೋಪ ಮಾಡಿಕೊಳ್ಳುವುದು ಗಮನಿಸಬೇಕಾದ ಲಕ್ಷಣವಾಗಿದೆ.
ಸಣ್ಣ ವಿಷಯಕ್ಕೂ ಕೋಪ: ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಆಗಾಗ ಜಗಳವಾಡುವುದು ಕೇವಲ ಹಠವಲ್ಲ, ಸಹಾಯದ ಅಗತ್ಯವಿರಬಹುದಾದ ಸೂಚನೆಯೂ ಆಗಿರಬಹುದು.
ಸಹಾಯಕ್ಕಾಗಿ ಮೌನ ಸಂಕೇತಗಳು: ಮಕ್ಕಳ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಸಹಾಯ ಕೋರುತ್ತಿರಬಹುದು.
ಪೋಷಕರು ಏನು ಮಾಡಬೇಕು?
ಮಕ್ಕಳನ್ನು ಬೈಯುವುದು ಅಥವಾ ದಂಡಿಸುವುದಕ್ಕಿಂತ, ಅವರೊಂದಿಗೆ ಸ್ನೇಹಿತರಂತೆ ಮಾತನಾಡಿ. ಪ್ರತಿದಿನ ಅವರ ಭಾವನೆಗಳನ್ನು ಆಲಿಸಿ, ಶಾಲೆ, ಸ್ನೇಹಿತರು ಹಾಗೂ ಕುಟುಂಬದ ಬಗ್ಗೆ ಮುಕ್ತವಾಗಿ ಚರ್ಚಿಸಿ. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ, ಮಕ್ಕಳ ಮನೋವೈದ್ಯರು ಅಥವಾ ಕೌನ್ಸಿಲರ್‌ರನ್ನು ಸಂಪರ್ಕಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
