ಬಾಲಿವುಡ್‌ನ ಖ್ಯಾತ ನಟಿ ಶೆಫಾಲಿ ಶಾ (Shefali Shah) ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ, ರಿಲೇಷನ್ಶಿಪ್ ಮತ್ತು ಮಕ್ಕಳ ಬಗ್ಗೆ ಮುಕ್ತವಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆಗೆ ಮದುವೆ (Marriage) ಮತ್ತು ಪೋಷಕರಾಗುವ ಬಗ್ಗೆ ಇರುವ ಸಾಮಾಜಿಕ ಒತ್ತಡಗಳ ಕುರಿತು ಮಾತನಾಡಿದ ಅವರು, ‘ಯುವಕರು ತಮ್ಮನ್ನು ತಾವು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲು ಜೀವನದ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಸರ ಪಡಬಾರದು’ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ತಮಾಷೆಯಾಗಿ, ‘ಮಕ್ಕಳನ್ನು ಹೆರುವ ಬದಲು ನಾಯಿಗಳನ್ನು (Dogs) ಸಾಕಿ, ಏಕೆಂದರೆ ಅವು ಯಾವುದೇ ಸ್ವಾರ್ಥವಿಲ್ಲದ ನಿಜವಾದ ಪ್ರೀತಿಯನ್ನು ನೀಡುತ್ತವೆ’ ಎಂದು ಹೇಳಿದ್ದಾರೆ.
ಲಿಲ್ಲಿ ಸಿಂಗ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಶೆಫಾಲಿ ಶಾ, ಯುವತಿಯರಿಗೆ ಬೇಗ ಮದುವೆ ಆಗದಂತೆ ಕಿವಿಮಾತು ಹೇಳಿದ್ದಾರೆ. ‘ನೀವಿನ್ನೂ ಮಕ್ಕಳಾಗಿದ್ದಾಗ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಡಿ. ಆ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆಯೇ ಸರಿಯಾದ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ದಯವಿಟ್ಟು ನಿಧಾನಿಸಿ. ಜೀವನದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನರನ್ನ ಭೇಟಿಯಾಗಿ, ಅವರನ್ನು ಅರ್ಥಮಾಡಿಕೊಳ್ಳಿ. ನೀವು ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ, ದಯವಿಟ್ಟು ಆ ಸಾಹಸಕ್ಕೆ ಕೈಹಾಕಬೇಡಿ. ಏಕೆಂದರೆ ಸಂಸಾರ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ’ ಎಂದು ಅವರು ಹೇಳಿದ್ದಾರೆ.
ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ, ಜೀವನ ಹಾಗೂ ಸಂಬಂಧಗಳಿಂದ ತಮಗೇನು ಬೇಕು ಎಂಬುದು ಸಂಪೂರ್ಣವಾಗಿ ಖಚಿತವಾಗುವ ಮುನ್ನ ಯಾರೂ ಮದುವೆಯ ನಿರ್ಧಾರವನ್ನು ಸಾಧಾರಣವಾಗಿ ತೆಗೆದುಕೊಳ್ಳಬಾರದು ಎಂದು ಶೆಫಾಲಿ ಶಾ ಅವರು ಒತ್ತಿ ಹೇಳಿದ್ದಾರೆ. ಅವರು ಕೂಡ ಖಾಸಗಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.
ಇದೇ ಸಂದರ್ಶನದ ವೇಳೆ ತಮಗೆ 37 ವರ್ಷ ವಯಸ್ಸಾಗಿದ್ದರೂ ಇನ್ನೂ ಮದುವೆಯಾಗಿಲ್ಲ ಎಂದು ಲಿಲ್ಲಿ ಸಿಂಗ್ ಬಹಿರಂಗಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, ‘ನಾನೊಂದು ಮಾತು ಹೇಳಲೇ? ಇದಕ್ಕಾಗಿ ನನ್ನನ್ನು ಜನ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಬಹುದು. ಆದರೂ ಪರವಾಗಿಲ್ಲ, ಮಕ್ಕಳನ್ನು ಮಾಡಿಕೊಳ್ಳಬೇಡಿ. ಅದರ ಬದಲು ನಾಯಿಗಳನ್ನು ಸಾಕಿ. ಕೇವಲ ನಾಯಿಗಳನ್ನು ತಂದುಕೊಳ್ಳಿ’ ಎಂದಿದ್ದಾರೆ. ಮನುಷ್ಯನ ಜೀವನದಲ್ಲಿ ನಾಯಿಗಳು ಮಾತ್ರವೇ ಬೇಷರತ್ ಪ್ರೀತಿ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೊನಾಲಿಸಾ ವಯಸ್ಸು ಕೇವಲ 16: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
ಶೆಫಾಲಿ ಶಾ ಅವರು ಈ ಹಿಂದೆ ಕಿರುತೆರೆ ನಟ ಹರ್ಷ್ ಛಾಯಾ ಅವರನ್ನು ವಿವಾಹವಾಗಿದ್ದರು. ಆದರೆ, ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ ಈ ದಂಪತಿ ದೂರಾಗಿದ್ದರು. ನಂತರ, 2000ನೇ ಇಸವಿಯಲ್ಲಿ ಶೆಫಾಲಿ ಅವರು ಚಲನಚಿತ್ರ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರನ್ನು ಆಪ್ತರ ಸಮ್ಮುಖದಲ್ಲಿ ಮದುವೆಯಾದರು. ಈ ದಂಪತಿಗೆ ಆರ್ಯಮನ್ ಮತ್ತು ಮೌರ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.