ವಯೋಮಿತಿ ಸಡಿಲಿಕೆಗೆ ಪೋಷಕರ ಪಟ್ಟು
Image Credit source: Google
ಬೆಂಗಳೂರು, ಮಾರ್ಚ್ 02: ಹೊಸ ಶಿಕ್ಷಣ ನೀತಿ (NEP) ಪ್ರಕಾರ ಪ್ರಥಮ ತರಗತಿಗೆ ಪ್ರವೇಶಕ್ಕೆ 6 ವರ್ಷ ನಿಗದಿ ಹಿನ್ನೆಲೆ, ನಿಗದಿಪಡಿಸಿದ ವಯೋಮಿತಿಯನ್ನು ಪೂರೈಸದ ಮಕ್ಕಳ ಪೋಷಕರು ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 90 ದಿನಗಳ ಸಡಿಲಿಕೆ ನೀಡುವಂತೆ ಕರ್ನಾಟಕ ಸರ್ಕಾರವನ್ನು ಪೋಷಕರು ಆಗ್ರಹಿಸಿದ್ದು, ಯುಕೆಜಿ ಮುಗಿದಿದೆ 1ನೇ ತರಗತಿಗೆ ದಾರಿ ಬಿಡಿ. ಸಮಯ ವ್ಯರ್ಥ ಮಾಡಬೇಡಿ, ಕಲಿಕೆಗೆ ಅವಕಾಶ ಕೊಡಿ. ಶಿಕ್ಷಣ ನಮ್ಮ ಹಕ್ಕು, ವಯಸ್ಸು ಅಡ್ಡಿಯಾಗದಿರಲಿ ಎಂಬಿತ್ಯಾದಿ ಪ್ಲೇ ಕಾರ್ಡ್ ಹಿಡಿದು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಆದೇಶಗಳಿಂದಾಗಿ ಯುಕೆಜಿ ಅಥವಾ ಮಾಂಟೆಸ್ಸರಿ ತರಗತಿಯನ್ನು ಮರುಕಳಿಸಬೇಕಾದ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಓರ್ವ ಪೋಷಕರು, ಇದು ಪ್ರತಿಭಟನೆ ಅಲ್ಲ. ಸರ್ಕಾರಕ್ಕೆ ನಾವು ಮಾಡುತ್ತಿರುವ ಮನವಿ. ಮೂರು ವರ್ಷಗಳ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳನ್ನು ಪ್ರಥಮ ತರಗತಿಗೆ ದಾಖಲಿಸಬೇಕು. ಆದರೆ ನಮ್ಮ ಮಕ್ಕಳು NEP ಪ್ರಕಾರ 6 ವರ್ಷದ ವಯೋಮಿತಿಯನ್ನು ಪೂರೈಸುತ್ತಿಲ್ಲ. ಈಗಿರುವ ತರಗತಿಯನ್ನು ಮರುಕಳಿಸುವುದು ಮಕ್ಕಳಿಗೆ ಮಾನಸಿಕ ಒತ್ತಡ ಉಂಟುಮಾಡುತ್ತದೆ. ಶಿಕ್ಷಣ ಸಂಸ್ಥೆಗಳು ಸಹ ಮಕ್ಕಳನ್ನು ಮರುಕಳಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರಾಚ್ಯದಲ್ಲಿ ಯುದ್ಧ; ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ
ಕಳೆದ ಎರಡು ವರ್ಷಗಳಿಂದ ನಾವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಂದ ಭರವಸೆ ಸಿಕ್ಕಿದೆ. ಕೋವಿಡ್ ಸಮಯದಲ್ಲಿ ಹುಟ್ಟಿದ ಈ ಮಕ್ಕಳು ಈಗಾಗಲೇ ಸಾಕಷ್ಟು ಭಾವನಾತ್ಮಕ ಮತ್ತು ಮಾನಸಿಕ ಒತ್ತಡ ಅನುಭವಿಸಿದ್ದಾರೆ. ಮತ್ತೊಮ್ಮೆ ತರಗತಿ ಮರುಕಳಿಸುವುದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕ ಸರ್ಕಾರದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. 2 ಲಕ್ಷಕ್ಕೂ ಹೆಚ್ಚು ಮಕ್ಕಳು ಸರ್ಕಾರದ ಆದೇಶದಿಂದಾಗಿ ತೊಂದರೆಗೆ ಸಿಲುಕಿದ್ದು, ದಾಖಲಾತಿ ವಿಚಾರದಲ್ಲಿ 90 ದಿನಗಳ ವಯಸ್ಸಿನ ಸಡಿಲಿಕೆ ಸಿಗಬಹುದೆಂಬ ವಿಶ್ವಾಸ ಇದೆ ಎಂದು ಮತ್ತೋರ್ವ ಪೋಷಕಿರು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಆದೇಶ?
2025-26ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಮಕ್ಕಳು ದಾಖಲಾಗಲು ಜೂನ್ 1ಕ್ಕೆ 6 ವರ್ಷಗಳು ತುಂಬಿರಬೇಕು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ನಿರ್ದೇಶನದ ಅನ್ವಯ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷ ಎಂದು ನಿಗದಿಪಡಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
